ನನ್ನಲ್ಲಿರುವ ಮಾಹಿತಿ ಬಹಿರಂಗವಾದ್ರೆ ಸರ್ಕಾರದ ಬುಡವೇ ಅಲ್ಲಾಡುತ್ತೆ : ವಸತಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್‌.ಪಾಟೀಲ ಆಡಿಯೋ ವೈರಲ್..!

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ವಸತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಆಡಿಯೋ ಕ್ಲಿಪ್ ಒಂದು ಶುಕ್ರವಾರ (ಜೂ.20) ಎಲ್ಲೆಡೆ ವೈರಲ್ ಆಗಿದೆ.
ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ನಲ್ಲಿ, ಶಾಸಕ ಬಿ.ಆರ್‌.ಪಾಟೀಲ ಅವರು ತಮ್ಮಲ್ಲಿರುವ ಮಾಹಿತಿ ಬಹಿರಂಗಪಡಿಸಿದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಬುಡವೇ ಅಲುಗಾಡುತ್ತದೆ ಎಂದು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ ಅವರು ವಸತಿ ಸಚಿವ ಜಮೀರ್ ಅಹ್ಮದ್‌ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆ ಮಾತನಾಡುತ್ತಿರುವುದು ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್‌ ಎಂದು ಹೇಳಲಾಗಿದೆ. ಪಾಟೀಲ ತಮ್ಮ ಕ್ಷೇತ್ರದೊಳಗಿನ ಹಳ್ಳಿಗಳಲ್ಲಿ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕಾರ್ಯದರ್ಶಿಯನ್ನು ಪ್ರಶ್ನಿಸಿದ್ದಾರೆ.

ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆ ನೀಡಲಾಗುತ್ತಿದೆ. ನೈಜ ಫಲಾನುಭವಿಗಳಿಗೆ ಮನೆ ಸಿಗುತ್ತಿಲ್ಲ ಎಂಬ ಆರೋಪವನ್ನು ಬಿ ಆರ್ ಪಾಟೀಲ ಮಾಡಿದ್ದಾರೆ.
“ಲಂಚ ನೀಡಿದವರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನಮ್ಮದೇ ಸರ್ಕಾರದ ವಿರುದ್ಧ ದೂರು ನೀಡಲು ನನಗೆ ಬೇಸರವಾಗಿದೆ. ವಿವಿಧ ಗ್ರಾಮಗಳಲ್ಲಿ ಒಟ್ಟು 950 ಮನೆಗಳನ್ನು ಫಲಾನುಭವಿಗಳಿಂದ ಹಣ ಪಡೆದು ಹಂಚಿಕೆ ಮಾಡಲಾಗಿದೆ. ನನ್ನ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬದಲಾಗಿ, ಗ್ರಾಮ ಪಂಚಾಯತ ಅಧ್ಯಕ್ಷರು ಸಲ್ಲಿಸಿದ ಪಟ್ಟಿಗೆ ಆದ್ಯತೆ ನೀಡಲಾಗಿದೆ” ಎಂದು ಶಾಸಕ ಪಾಟೀಲ ದೂರಿದ್ದಾರೆ.
ಈ ವೇಳೆ ಸರ್ಫರಾಜ್ ಖಾನ್ ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಕೇಳಿಬರುತ್ತದೆ. ತಮ್ಮ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಿ ಎಂದು ಹೇಳಿದ್ದಾರೆ ಹಾಗೂ ಅವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇಲಾಖೆಯ ವಿರುದ್ಧವೇ ಬಿ ಆರ್ ಪಾಟೀಲ್ ಆರೋಪ ಮಾಡಿದ್ದು ಸಂಚಲನ ಸೃಷ್ಟಿಸಿದೆ. ಆದರೆ ಆಡಿಯೋ ಕ್ಲಿಪ್ ಬಿಡುಗಡೆಯಾದ ನಂತರ, ಶಾಸಕ ಪಾಟೀಲ ಹಾಗೂ ಕಾಂಗ್ರೆಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಏತನ್ಮಧ್ಯೆ, ಕರ್ನಾಟಕ ಬಿಜೆಪಿ ಘಟಕ ಆಡಿಯೋ ಕ್ಲಿಪ್ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸುತ್ತದೆ ಎಂದು ಹೇಳಿದೆ. ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜೂನ್‌ 21ರಿಂದ 4 ದಿನ ಜೋರಾದ ಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

“ಕಾಂಗ್ರೆಸ್ ಶಾಸಕ ಮತ್ತು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಹೇಳಿದ್ದರು. ಈಗ ಆ ಹೇಳಿಕೆಯನ್ನು ಬಲಪಡಿಸುವ ರೀತಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ” ಎಂದು ವಿಧಾನಸಭೆಯ ವಿಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement