ಬೆಂಗಳೂರು: ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೆ ಹಸು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಸೂಲಿವಾರದ ಡೇರಿ ಅಧ್ಯಕ್ಷರಾದ ಮರಿಬಸವಯ್ಯ ಎಂಬವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದು, ಹಳೆಯ ವೈಷಮ್ಯಕ್ಕೆ ಹಸುವಿನ ಕೆಚ್ಚಲ ಕೊಯ್ದಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಸುಮಾರು 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೇ ಹಸು ಮೃತಪಟ್ಟಿದೆ.
ಪಕ್ಕದ ಜಮೀನಿಗೆ ಹಸು ಮೇಯಲು ಹೋದಾಗ ವಿಕೃತಿ ನಡೆಸಿದ್ದಾರೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಸು ಮೇಯಲು ಹೋಗಿದ್ದಾಗ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಹಸುವಿನ ರೋದನ ಕೇಳಿ ಸ್ಥಳೀಯರು ಓಡಿಬಂದಿದ್ದಾರೆ. ನಂತರ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆಕಳು ಮೃತಪಟ್ಟಿದೆ.
ನಿಮ್ಮ ಕಾಮೆಂಟ್ ಬರೆಯಿರಿ