ಬ್ರೆಸಿಲಿಯಾ: ಬ್ರೆಜಿಲ್ನ ಪ್ರವಾಸಿ ತಾಣದಲ್ಲಿ ಭೀಕರ ದುರಂತ ಸಂಭವಿಸಿದ್ದು, ಹಾಟ್ ಏರ್ ಬಲೂನ್ ಆಕಾಶದಲ್ಲಿಯೇ ಸ್ಫೋಟಗೊಂಡಿದ್ದರಿಂದ 8 ಮಂದಿ ದಾರುಣ ಸಾವಿಗೀಡಾಗಿದ್ದಾರೆ.
ಬ್ರೆಜಿಲ್ನ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪ್ರೈಯಾ ಗ್ರ್ಯಾಂಡೇ ಎಂಬಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸುಮಾರು 21 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಾಟ್ ಏರ್ ಬಲೂನ್ ಆಕಾಶದಲ್ಲಿಯೇ ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ 8 ಜನರು ಸಾವಿಗೀಡಾಗಿದ್ದು, 13 ಮಂದಿಗೆ ಗಾಯಗೊಂಡಿದ್ದಾರೆ. ಏರ್ ಬಲೂನ್ ಸ್ಫೋಟದ ದೃಶ್ಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂನ್ 21 ಶನಿವಾರ ಬೆಳಗ್ಗೆ ಸುಮಾರು 21 ಪ್ರವಾಸಿಗರನ್ನು ಹತ್ತಿಸಿಕೊಂಡ ಹಾಟ್ ಏರ್ ಬಲೂನ್ ನಂತರ ಆಕಾಶದಲ್ಲಿ ಮೇಲಕ್ಕೆ ಹಾರಾಡಿದೆ. ಈ ವೇಳೆ ಹಾಟ್ ಏರ್ ಬಲೂನ್ ಸ್ಫೋಟ ಸಂಭವಿಸಿದೆ.
ಬಲೂನ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತುಕೊಂಡಿದೆ. ಬೆಂಕಿಯ ತೀವ್ರತೆಗೆ 8 ಮಂದಿ ಸಾವಿಗೀಡಾಗಿದ್ದು, 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೆಜಿಲ್ ನ ಸಾಂತಾ ಕ್ಯಾಟರೀನಾ ಪ್ರದೇಶವು ಪ್ರವಾಸಿ ತಾಣಗಳಿಗೇ ಖ್ಯಾತಿ ಗಳಿಸಿದ್ದು, ಹಾಟ್ ಏರ್ ಬಲೂನ್ನಲ್ಲಿ ಸವಾರಿ ಮಾಡಲು ಜನರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಕಾಶದಲ್ಲಿ 30 ಕ್ಕೂ ಹೆಚ್ಚು ಬಲೂನ್ಗಳು ಹಾರುತ್ತಿದ್ದಾಗ ಒಂದು ಬಲೂನ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಬಲೂನ್ ಸ್ಫೋಟದ ಭೀಕರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಗ್ಯಾಸ್ ಟಾರ್ಚ್ನಿಂದ ಬೆಂಕಿ
ಈ ಅಪಘಾತದಿಂದ ಬದುಕುಳಿದ ಬಲೂನಿನ ಪೈಲಟ್ ಘಟನೆಯ ಭೀಕರತೆ ಬಗ್ಗೆ ಹೇಳಿದ್ದಾರೆ. ಹಾಟ್ ಏರ್ ಬಲೂನ್ ಬುಟ್ಟಿಯಲ್ಲಿ ಇರಿಸಲಾಗಿದ್ದ ಹೆಚ್ಚುವರಿ ಗ್ಯಾಸ್ ಟಾರ್ಚ್ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ, ಅವರು ಬಲೂನನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸಿದ್ದು, ಅಷ್ಟರಲ್ಲಾಗಲೇ ಬೆಂಕಿ ಇಡೀ ಬಲೂನಿಗೆ ವ್ಯಾಪಿಸಿದೆ. ಈ ವೇಳೆ ಅದರೊಳಗಿದ್ದವರು ತಕ್ಷಣವೇ ಕೆಳಗೆ ಜಿಗಿಯಿರಿ ಎಂದು ಕೂಗಿದ್ದಾರೆ. ಈ ವೇಳೆ ಕೆಲವರು ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬಲೂನ್ ನಲ್ಲಿದ್ದವರಿಗೆ ಬೆಂಕಿ ತಗುಲಿದ್ದರಿಂದ ತೀವ್ರ ಗಾಯವಾಗಿ ಹಲವರು ಮೃತಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ