ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಒಂದೇ ಸ್ಥಳದಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಐದು ಹುಲಿಗಳ ಮೃತದೇಹಗಳು ಕೇವಲ 50 ಅಡಿಗಳಷ್ಟು ಅಂತರಲ್ಲಿ ಪತ್ತೆಯಾಗಿದೆ.
ಒಂದು ತಾಯಿ ಹುಲಿ ಮತ್ತು 4 ಮರಿ ಸೇರಿ ಐದು ಹುಲಿಗಳು ಸಾವಿಗೀಡಾಗಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ್ದ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿ ಸೇರಿ ಒಟ್ಟು 5 ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಲಾಗಿದೆ. ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಪಿಸಿಸಿಎಫ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ತನಿಖೆ ನಡೆಸಿ ಮೂರು ದಿನಗಳ ಒಳಗಾಗಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಹುಲಿಗಳ ಈ ಅಸಹಜ ಸಾವಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯವಿದ್ದರೆ ಅವರ ವಿರುದ್ಧವೂ ಕೈ ಕೈಗೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿಗಳು ಅಸಜ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) ಆರಂಭಿಸಿದ ತರುವಾಯ ರಾಜ್ಯದಲ್ಲಿಯೂ ಹುಲಿಗಳ ಸಂರಕ್ಷಣೆಗೆ ಕ್ರಮ ವಹಿಸಲಾಗಿದೆ. 563 ಹುಲಿಗಳೊಂದಿಗೆ ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ಹುಲಿ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ, ಒಂದೇ ದಿನ ಐದು ಹುಲಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ. ತಕ್ಷಣವೇ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ರಚಿಸಿ, ಸ್ಥಳ ತನಿಖೆ ಕೈಗೊಂಡು, ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿದ್ಯುತ್ ಸ್ಪರ್ಶ, ವಿಷ ಪ್ರಾಷನ ಇತ್ಯಾದಿ ಸಾವಿಗೆ ಕಾರಣವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಮತ್ತು 3 ದಿನಗಳ ಒಳಗಾಗಿ ವರದಿಯನ್ನು ಈ ಕಚೇರಿಗೆ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ