ಬೆಳಗಾವಿ : ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶನಿವಾರ ಯುವಕರ ಗುಂಪು ಶ್ರೀರಾಮ ಸೇನೆಯ ಐವರು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ವರದಿಯಾಗಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿವೆ.
ಗೋ ಸಾಗಣೆ ತಡೆಯಲು ಮುಂದಾಗಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಘಟನೆಗೂ ಗೋ ರಕ್ಷಣೆಗೂ ಯಾವುದೇ ಸಂಬಂಧವಿಲ್ಲ. ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಥಳಿಸಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಎರಡೂ ಕಡೆಯಿಂದ ದೂರು ದಾಖಲಾಗಿಲ್ಲ. ವಿಡಿಯೊ ಆಧರಿಸಿ ಹುಕ್ಕೇರಿ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಜೂನ್ 27ರಂದು ಗೋವುಗಳ ಸಾಗಾಟ ಮಾಡುತ್ತಿದ್ದ ಮಾಹಿತಿ ಲಭಿಸಿದ ನಂತರ ಅದನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರು, ಗೋವುಗಳ ಸಹಿತವಾಗಿ ವಾಹನವನ್ನು ಹುಕ್ಕೇರಿ ಪೊಲೀಸ್ ಠಾಣೆಗೆ ತಂದಿದ್ದರು. ನಂತರ ಅವುಗಳನ್ನು ಬೆಳವಿ ಗೋಶಾಲೆಗೆ ಸಾಗಿಸಲಾಗಿತ್ತು. ಶನಿವಾರ ಮತ್ತೆ ಗೋವುಗಳನ್ನು ಅಲ್ಲಿಂದ ಬಿಡಿಸಿಕೊಂಡು ಹೋಗಿದ್ದಾರೆ.. ಗೋವುಗಳನ್ನು ಬಿಡಿಸಿಕೊಂಡು ಹೋದ ವಿಚಾರ ಕಾರ್ಯಕರ್ತರಿಗೆ ಗೊತ್ತಾಗಿದೆ. ತಕ್ಷಣವೇ ಅದನ್ನು ತಡೆಯಲು ಗ್ರಾಮಕ್ಕೆ ಬಂದು ಪ್ರಶ್ನೆ ಮಾಡಿದ್ದಾರೆ. ಆಗ ಅವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.
ಈ ಘಟನೆಯನ್ನು ಶ್ರೀರಾಮ ಸೇನೆ ಸಂಘಟನೆ ಬಲವಾಗಿ ಖಂಡಿಸಿದೆ. ಆರೋಪಿಗಳನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ವೀಡಿಯೊ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ