ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೂವರು ಹಿರಿಯ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಕೆ.ಶಾಮರಾವ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ಅವರಿಗೆ, ಡಾ.ಯು ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಗಣೇಶ ಇಟಗಿ ಹಾಗೂ ಜಿ.ಎಸ್ ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ದೀಪಕಕುಮಾರ ಶೇಣ್ವಿ ಅವರಿಗೆ ನೀಡಿ ಗೌರವಿಸಲಾಯಿತು.
ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಟಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮಹಾಬಲ ಸೀತಾಳಬಾವಿ, ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಗುಣಮಟ್ಟದ ಪತ್ರಕರ್ತರು ಬರುತ್ತಾರೆ. ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳ ಮುಖ್ಯ ಸ್ಥಾನದಲ್ಲಿ ಉತ್ತರ ಕನ್ನಡದವರೇ ಇದ್ದಾರೆ. ಭಾಷೆ ನಮ್ಮ ಜಿಲ್ಲೆಯ ಪತ್ರಕರ್ತರಿಗೆ ವರವಾಗಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಅಷ್ಟು ಪ್ರಬಲವಾಗಿದೆ. ದೊಡ್ಡ ದೊಡ್ಡ ಪತ್ರಕರ್ತರಾಗುವ ಸಾಮರ್ಥ್ಯವಿರುವ ಅನೇಕ ಪತ್ರಕರ್ತರು ಇಲ್ಲಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ಬದ್ಧತೆ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರಿಗಿದೆ ಎಂದರು.
ದಿನ ಪತ್ರಿಕೆಗಳಿಗೆ ಯುವ ಪತ್ರಕರ್ತರು ಬರುವುದು ಬಹಳ ಕಡಿಮೆಯಾಗುತ್ತಿದೆ. ಕೆಲಸ ಕಲಿಯುವ ಗುಣ ಇಂದಿನ ಪತ್ರಕರ್ತರಿಗೆ ಬಹಳ ಕಡಿಮೆ ಇದೆ. ಆದರೆ ಉತ್ತರ ಕನ್ನಡ ಜಿಲ್ಲೆಯಿಂದ ಬರುವ ಪತ್ರಕರ್ತರಿಗೆ ಆ ಬದ್ಧತೆ ಇಂದಿಗೂ ಕಾಣಿಸುತ್ತಿದೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರಿಗೆ ರಾಜ್ಯ ಮಟ್ಟದಲ್ಲಿ ಮಾನ್ಯತೆ ಸಿಗುತ್ತಿದೆ ಎಂದರು.

ಕನ್ನಡ ಪತ್ರಿಕೋದ್ಯಮದ ಸುವರ್ಣ ಯುಗ ಮುಗಿದುಹೋಗಿದೆ. ಈಗಿರುವುದನ್ನು ಎಷ್ಟು ದಿನ ಉಳಿಸಿಕೊಳ್ಳಬಹುದು ಎಂದು ಯೋಚಿಸುವ ದಿನ ಬಂದಿದೆ. ಮುಂದಿನ 10ರಿಂದ15 ವರ್ಷಗಳ ವರೆಗೆ ಪತ್ರಿಕೆಗಳು ಇರಬಹುದು. ಪತ್ರಿಕೆಗಳ‌ ಮೊದಲು ಟಿವಿ ಮಾಧ್ಯಮಗಳು ಬಾಗಿಲು ಹಾಕಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಚಾನೆಲ್ ಗಳೂ ಸಹ ಕೊನೆಯ ಹಂತಕ್ಕೆ ಬಂದು ತಲುಪಿದೆ. ಪತ್ರಿಕೆಗಳು, ಚಾನೆಲ್‌ಗಳು ಮೊಬೈಲ್ ನಲ್ಲಿ ಮಾತ್ರ ಕಾಣುವ ದಿನ ದೂರವಿಲ್ಲ ಎಂದರು.
ಅಮೆರಿಕದಲ್ಲಿ ನಡೆದ ಸಮೀಕ್ಷೆಗಳು ಭಾರತದಲ್ಲಿ ನಡೆದರೆ ಬಾಗಿಲು ಹಾಕಿದ ಪತ್ರಿಕೆಗಳ ಸಂಖ್ಯೆ ನಮಗೆ ಗೋಚರಿಸುತ್ತದೆ. ಮೊದಲು ಪತ್ರಿಕೋದ್ಯಮ ಸಮಾಜ ಸೇವೆಯಾಗಿತ್ತು. ಇದೀಗ ಉದ್ಯಮವಾಗಿ ಮಾರ್ಪಾಡುಗೊಂಡಿದೆ. ಜಾಹೀರಾತು ಗಳ ಮೂಲಕವೇ ಪತ್ರಿಕೆಯನ್ನು ನಡೆಸಬೇಕಿದೆ. ಮೋದಲಿನಷ್ಟು ಜಾಹೀರಾತುಗಳೂ ಬರುತ್ತಿಲ್ಲ. ಸರ್ಕಾರದ ಜಾಹೀರಾತುಗಳನ್ನೇ ನಂಬಿ ಹಲವು ಪತ್ರಿಕೆಗಳು ಇಂದು ಕಾರ್ಯನಿರ್ವಹಿಸುತ್ತಿದೆ. ಜಾಹೀರಾತುಗಳು ಡಿಜಿಟಲೀಕರಣ ಗೊಂಡಿದೆ. ಜಾಹೀರಾತಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಇವೆಲ್ಲಾ ಕಾರಣಗಳಿಂದ ಪತ್ರಿಕೆಗಳು ವೃದ್ಧಾಪ್ಯ ಹಂತಕ್ಕೆ ಬಂದು ತಲುಪಿದೆ. ಅನುಭವಿ ಪತ್ರಕರ್ತರು ಪತ್ರಿಕಾ ಕಚೇರಿಯಲ್ಲಿ ಉಳಿಯುತ್ತಿಲ್ಲ. ಇದರಿಂದಲೂ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದರು.

ಪ್ರಮುಖ ಸುದ್ದಿ :-   ವಾಲ್ಮೀಕಿ ಹಗರಣ | ರಾಜ್ಯ ಸರ್ಕಾರಕ್ಕೆ ಹಿನ್ನಡೆ, ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ; ಹಲವರಿಗೆ ಶುರುವಾಯ್ತು ಢವ ಢವ

ಬೆಂಗಳೂರಿನಂತಹ ನಗರಗಳಲ್ಲಿ ಪತ್ರಿಕೆಗಳನ್ನು ಯಾವ ಮಕ್ಕಳೂ ಕಣ್ಣೆತ್ತಿಯೂ ನೋಡುವುದಿಲ್ಲ. ಟಿವಿ ಚಾನೆಲ್ ಗಳನ್ನೂ ನೋಡುವುದಿಲ್ಲ. ಪತ್ರಿಕೋದ್ಯಮದಲ್ಲಿ ವೇಗವಾಗಿ ಬದಲಾವಣೆಯಾಗುತ್ತಿದೆ. ಮೊಬೈಲ್ ನ್ಯೂಸ್ ಡೈನಾಮಿಕ್ಸ್ ಗಳನ್ನು ಕರಗತ ಮಾಡಿಕೊಳ್ಳುವ ಪತ್ರಕರ್ತರು ಬಂದರೆ ಬದಲಾವಣೆ ಆಗಬಹುದು. ಬದಲಾಗುತ್ತಿರುವ ಪತ್ರಿಕೋದ್ಯಮವನ್ನು ಅರಿತು ಕೆಲಸ ಮಾಡಿದರೆ ಪತ್ರಿಕೋದ್ಯಮದಲ್ಲಿ ಉಳಿಯಲು ಸಾಧ್ಯ ಎಂದರು.
ಡಿವೈಎಸ್ಪಿ ಗೀತಾ ಪಾಟೀಲ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪತ್ರಿಕೆಗಳಿವೆ. ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಓದುವ ಹವ್ಯಾಸಗಳಿವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಷ್ಟೇ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದರು.
ಹಿರಿಯ ಸಹಕಾರಿ ಸುಭಾಷ್ ಶೆಟ್ಟಿ ಮಾತನಾಡಿ, ಡಾ ಚಿತ್ತರಂಜನ್ ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಆಶಯನುಡಿಗಳ್ನಾಡಿ ಇವತ್ತಿನ ಮಾಧ್ಯಮದ ಪೈಪೋಟಿ ನಡುವೆ ಪತ್ರಿಕೆಯನ್ನು ನಡೆಸುವುದು ಬಹಳ ಸವಾಲಾಗಿದೆ ಎಂದರು. ಈ ಮೊದಲು ಎರಡು ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿತ್ತು. ಈ ವರ್ಷದಿಂದ ಚಿತ್ತರಂಜನ್ ಹೆಸರಿನಲ್ಲಿ ದತ್ತಿನಿಧಿ ನೀಡಿ ಗೌರವಿಸಲಾಗುತ್ತಿದೆ‌ ಎಂದರು. ಪತ್ರಕರ್ತರ ಹಿತದೃಷ್ಟಿಯಿಂದ ಸಹಕಾರಿ ಸಂಘವನ್ನು ಸ್ಥಾಪಿಸಬೇಕು ಎಂಬ ಮಹದಾಸೆ ನಮ್ಮದಾಗಿದೆ ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರು ಕಾಲ್ತುಳಿತ ಪ್ರಕರಣ | ಐಪಿಎಸ್‌ ಅಧಿಕಾರಿ ವಿಕಾಸಕುಮಾರ ಅಮಾನತು ಆದೇಶ ರದ್ದುಗೊಳಿಸಿದ ಸಿಎಟಿ; ಸರ್ಕಾರಕ್ಕೆ ಹಿನ್ನಡೆ

ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ, ಹಿರಿಯ ಪತ್ರಕರ್ತ ದೀಪಕ ಕುಮಾರ್ ಶೇಣ್ವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಶಸ್ತಿ ಪುರಸ್ಕೃತರಾದ ಶೈಲಜಾ ಗೋರನಮನೆ ಕುರಿತು ಸುಮಂಗಲಾ ಹೊನ್ನೆಕೊಪ್ಪ, ಗಣೇಶ ಹೆಗಡೆ ಇಟಗಿ ಅವರ ಕುರಿತು ವಿನುತಾ ಹೆಗಡೆ ಹಾಗೂ ದೀಪಕಕುಮಾರ ಶೇಣ್ವಿ ಅವರ ಕುರಿತು ಪ್ರಭಾವತಿ ಗೋವಿ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಸುಜನ್ ಮನಮೋಹನ್ ನಾಯ್ಕ ಹಾಗೂ ದೀಪ್ತಿ ದತ್ತಾತ್ರೇಯ ಭಟ್ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ತುಳಸಿ ರಾಘವೇಂದ್ರ ಹೆಗಡೆ ಅವರನ್ನು ಪುರಸ್ಕರಿಸಲಾಯಿತು.
ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಸಾಧನೆಗಳನ್ನು ಮಾಡಬಹುದು. ಪತ್ರಕರ್ತರು ಸಾಕಷ್ಟು ಕಷ್ಟ ನಷ್ಟವನ್ನು ಅನುಭವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಖಜಾಂಚಿ ರಾಜೇಂದ್ರ ಹೆಗಡೆ, ಪತ್ರಿಕಾ ಮಂಡಳಿ ಸದಸ್ಯ ಪ್ರದೀಪ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಮೊದಲಾದವರಿ ಇದ್ದರು.
ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ರಾಘವೇಂದ್ರ ಬೆಟ್ಕೋಪ್ಪ ನಿರೂಪಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement