ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ನವದೆಹಲಿ: ಕೋವಿಡ್-19 ಲಸಿಕೆಗಳನ್ನು “ಪರಿಣಾಮಕಾರಿ” ಎಂದು ಕರೆದ ದೆಹಲಿಯ ಏಮ್ಸ್ ವೈದ್ಯರು, ವ್ಯಾಕ್ಸಿನೇಷನ್ ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವುಗಳಿಗೆ ಸಂಬಂಧವಿದೆ ಎಂಬುದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ದೆಹಲಿಯ ಏಮ್ಸ್‌ನ ಶ್ವಾಸಕೋಶ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಕರಣ ಮದನ ಅವರು, ಈವರೆಗೆ ಬಳಸಲಾದ ಲಸಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಹಠಾತ್ ಹೃದಯಾಘಾತದ ಸಾವುಗಳ ಕುರಿತು ಅಧ್ಯಯನ ನಡೆಸಲಾಗಿದೆ, ಆದರೆ ಹಠಾತ್ ಹೃದಯಾಘಾತದ ಸಾವುಗಳೊಂದಿಗೆ ಯಾವುದೇ ಸ್ಪಷ್ಟ ಸಂಬಂಧ ಕಂಡುಬಂದಿಲ್ಲ ಎಂದು ಹೇಳಿದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಕರಲ್ಲಿ ಹಠಾತ್ ಸಾವುಗಳ ಹಿಂದಿನ ಕಾರಣಗಳ ಬಗ್ಗೆ ಮತ್ತು ಕೋವಿಡ್-19 ಲಸಿಕೆಗಳು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದೇ ಎಂದು ನೋಡಲು ಅಧ್ಯಯನ ಮಾಡಲು ಆದೇಶಿಸಿದ ನಂತರ ಡಾ. ಕರಣ ಮದನ ಅವರ ಹೇಳಿಕೆ ಬಂದಿದೆ. ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳೊಳಗೆ 21 ಹೃದಯಾಘಾತದ ಸಾವುಗಳು ವರದಿಯಾಗಿವೆ.

“ಕೋವಿಡ್‌ (COVID) ಲಸಿಕೆಗಳು ಪರಿಣಾಮಕಾರಿ ಲಸಿಕೆಗಳಾಗಿದ್ದವು ಮತ್ತು ಅವು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಸಾಂಕ್ರಾಮಿಕ ಸಮಯದಲ್ಲಿ, ಲಸಿಕೆಗಳು ಜೀವಗಳನ್ನು ಉಳಿಸಲು ಏಕೈಕ ಸಂಭಾವ್ಯ ಕ್ರಮಗಳಾಗಿವೆ. ಲಸಿಕೆಗಳನ್ನು ಹೆಚ್ಚಿನ ಸಂಖ್ಯೆಯ ಜನರ ಮೇಲೆ ಬಳಸಲಾಗಿದೆ ಮತ್ತು ಹೆಚ್ಚುವರಿ ಮರಣವನ್ನು ತಡೆಗಟ್ಟುವಲ್ಲಿ ಅವು ಬಹಳಷ್ಟು ಪ್ರಯೋಜನಗಳನ್ನು ಒದಗಿಸಿದವು. ಲಸಿಕೆಗಳಿಂದ ಒದಗಿಸಲಾದ ಪ್ರಯೋಜನಗಳು ಅಪಾರವಾಗಿವೆ. ಈವರೆಗೆ ಬಳಸಲಾದ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಪರಿಶೀಲಿಸಲು ಹಠಾತ್ ಹೃದಯಸಂಬಂಧಿ ಸಾವುಗಳ ಕುರಿತು ಅಧ್ಯಯನವನ್ನು ನಡೆಸಲಾಯಿತು, ಆದರೆ ಹಠಾತ್ ಹೃದಯ ಸಂಬಂಧಿ ಸಾವುಗಳೊಂದಿಗೆ ಯಾವುದೇ ಸ್ಪಷ್ಟ ಸಂಬಂಧ ಕಂಡುಬಂದಿಲ್ಲ” ಎಂದು ಹೇಳಿದರು.
ಹಾಸನದಲ್ಲಿ ಹೃದಯಾಘಾತದಿಂದ ವರದಿಯಾದ ಸಾವುಗಳಲ್ಲಿ, 20 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು, 21-29 ವರ್ಷ ವಯಸ್ಸಿನವರು ಒಬ್ಬರು, 30-40 ವರ್ಷ ವಯಸ್ಸಿನ ಐವರು, 41-59 ವರ್ಷ ವಯಸ್ಸಿನ ಏಳು ಜನರುಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಒಬ್ಬರು ಇದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೃದಯಾಘಾತದ ಸಾವುಗಳ ಬಗ್ಗೆ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಡಾ. ಸಿ.ಎನ್. ರವೀಂದ್ರ ನೇತೃತ್ವದಲ್ಲಿ ತಜ್ಞರು ಅಧ್ಯಯನವನ್ನು ನಡೆಸಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಪತ್ರಿಕಾಗೋಷ್ಠಿಯಲ್ಲಿ ಡಾ. ಮದನ್ ಅವರೊಂದಿಗೆ ಹಾಜರಿದ್ದ ಏಮ್ಸ್ ದೆಹಲಿಯ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್‌ನ ಪ್ರಾಧ್ಯಾಪಕ ಡಾ. ಸಂಜಯ ರೈ, “ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿತ್ವವು 62.1 ಆಗಿತ್ತು… ಪ್ರಸ್ತುತ, ವಿವಿಧ ನಿಯಂತ್ರಕ ಅಧಿಕಾರಿಗಳು ಈಗಾಗಲೇ 37 ಲಸಿಕೆಗಳನ್ನು ಅನುಮೋದಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸುಮಾರು 12 ಲಸಿಕೆಗಳನ್ನು ಅನುಮೋದಿಸಿದೆ ಮತ್ತು ಈ ಲಸಿಕೆಗಳಲ್ಲಿ ಹೆಚ್ಚಿನವು ವಿಭಿನ್ನ ತಂತ್ರಜ್ಞಾನಗಳನ್ನು ಆಧರಿಸಿವೆ. ನೀವು ಕೋವಾಕ್ಸಿನ್ ಅನ್ನು ನೋಡಿದರೆ, ಇದು ಹಳೆಯ ತಂತ್ರಜ್ಞಾನ… ಕೋವಿಶೀಲ್ಡ್ ಅಡೆನೊವೈರಸ್ ಎಂಬ ವೆಕ್ಟರ್ ಅನ್ನು ಬಳಸುತ್ತದೆ… ಇನ್ನೊಂದು ಲಸಿಕೆ, ಸ್ಪುಟ್ನಿಕ್, ಬಹುತೇಕ ಅದೇ ತತ್ವ… ಪ್ರಪಂಚದಾದ್ಯಂತ 13 ಶತಕೋಟಿಗಿಂತಲೂ ಹೆಚ್ಚು ಡೋಸ್‌ಗಳನ್ನು ಈಗಾಗಲೇ ನೀಡಲಾಗಿದೆ. ಅಮೆರಿಕದಂತಹ ದೇಶಗಳಿವೆ, ಅವರು ಇದೀಗ ನಾಲ್ಕನೇ ಡೋಸ್ ಅನ್ನು ಪೂರ್ಣಗೊಳಿಸಿದ್ದಾರೆ. ಆರು ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ಹೊಸ ರೂಪಾಂತರದೊಂದಿಗೆ ಲಸಿಕೆ ಪಡೆಯಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡುತ್ತಿದೆ” ಎಂದು ಹೇಳಿದರು.
ಏತನ್ಮಧ್ಯೆ, ಏಮ್ಸ್ ದೆಹಲಿಯ ಮಾಜಿ ನಿರ್ದೇಶಕ ಡಾ. ರಣದೀಪ ಗುಲೇರಿಯಾ, ಕೋವಿಡ್‌-19 (COVID-19) ಲಸಿಕೆಗಳು, ಎಲ್ಲಾ ಲಸಿಕೆಗಳು ಮತ್ತು ಔಷಧಿಗಳಂತೆ, ಕೆಲವು ಅಡ್ಡಪರಿಣಾಮಗಳನ್ನು ಹೊಂದಿದ್ದರೂ, ಕೋವಿಡ್-19 ಲಸಿಕೆ ಮತ್ತು ಹೃದಯಾಘಾತದ ನಡುವೆ ಯಾವುದೇ ಸ್ಥಾಪಿತ ಸಂಬಂಧ ಕಂಡುಬಂದಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

“ಹಠಾತ್ ಹೃದಯ ಸ್ತಂಭನದಿಂದ ಯುವಕರು ಸಾಯುತ್ತಿರುವ ವರದಿಗಳಿವೆ. ಈ ಕಾರಣವನ್ನು ಪರಿಶೀಲಿಸಲು ಅಧ್ಯಯನಗಳು ನಡೆದಿವೆ. ನೀವು ಐಸಿಎಂಆರ್‌ (ICMR) ಮತ್ತು ಏಮ್ಸ್‌ (AIIMS)ನ ಅಧ್ಯಯನಗಳನ್ನು ನೋಡಿದರೆ, ಈ ಯುವ ಸಾವುಗಳು ಕೋವಿಡ್‌-19 ಲಸಿಕೆಗಳಿಗೆ ಸಂಬಂಧಿಸಿಲ್ಲ ಎಂದು ಅವು ಸ್ಪಷ್ಟವಾಗಿ ತೋರಿಸಿವೆ. ಎಲ್ಲಾ ಲಸಿಕೆಗಳು/ಔಷಧಿಗಳು ಕೆಲವು ಅಡ್ಡಪರಿಣಾಮಗಳನ್ನು ಹೊಂದಿವೆ, ಅದರಂತೆ ಕೋವಿಡ್‌-19 ಲಸಿಕೆಗಳು ಕೆಲವು ಅಡ್ಡಪರಿಣಾಮಗಳನ್ನು ಹೊಂದಿವೆ, ಆದರೆ ಕೋವಿಡ್‌-19 ಲಸಿಕೆ ಮತ್ತು ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ. ಯಾವುದೇ ಅಧ್ಯಯನಗಳು ಅದನ್ನು ತೋರಿಸಿಲ್ಲ” ಎಂದು ಅವರು ಹೇಳಿದರು.
ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೃದಯ ಕಾಯಿಲೆಗಳಿಗೆ ಕಾರಣವಾಗುವ ಅಂಶಗಳೆಂದು ಉಲ್ಲೇಖಿಸಲಾಗಿದ್ದರೂ, ಹಾಸನದಲ್ಲಿನ ಪ್ರಕರಣಗಳು ಹಲವಾರು ಪ್ರಶ್ನೆಗಳನ್ನು ಎತ್ತಿವೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ, ತಜ್ಞರ ತಂಡವು 10 ದಿನಗಳಲ್ಲಿ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement