ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ (N Ravikumar) ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜೆ.ಪಿ.ನಗರದ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 351(3), 75(3), 79 ಅಡಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 1 ರಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ರವಿಕುಮಾರ ಅವರು ಮುಖ್ಯ ಕಾರ್ಯದರ್ಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಿಜೆಪಿ ನಿಯೋಗದಿಂದ ಮನವಿ ಸ್ವೀಕರಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಗೈರುಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರವಿಕುಮಾರ ಮುಖ್ಯಕಾರ್ಯದರ್ಶಿಯವರನ್ನು ಅಣಕಿಸಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘವು ರವಿಕುಮಾರ ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದ್ದು, ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. “ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ರವಿಕುಮಾರ ಅವರ ಅವಹೇಳನಕಾರಿ ಮತ್ತು ಆಕ್ರಮಣಕಾರಿ ಹೇಳಿಕೆಗಳನ್ನು ಸಂಘವು ಬಲವಾಗಿ ಖಂಡಿಸುತ್ತದೆ” ಎಂದು ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘ ತಿಳಿಸಿದೆ.
ಮುಖ್ಯ ಕಾರ್ಯದರ್ಶಿಯವರು ಕರ್ನಾಟಕದ ಅತ್ಯುನ್ನತ ನಾಗರಿಕ ಹುದ್ದೆಯನ್ನು ಹೊಂದಿದ್ದಾರೆ ಮತ್ತು ಅವರ ಸಮಗ್ರತೆ, ಬದ್ಧತೆ ಮತ್ತು ವಿಶಿಷ್ಟ ಸಾರ್ವಜನಿಕ ಸೇವೆಗೆ ಹೆಸರುವಾಸಿಯಾದ ವ್ಯಾಪಕ ಗೌರವಾನ್ವಿತ ಅಧಿಕಾರಿ ಎಂದು ಸಂಘವು ತಿಳಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ರವಿಕುಮಾರ ಸಾರ್ವಜನಿಕ ಮತ್ತು ಬೇಷರತ್ತಾದ ಕ್ಷಮೆಯಾಚಿಸಬೇಕು ಎಂದು ಮಂಡಳಿ ಒತ್ತಾಯಿಸಿದೆ.ಕಾನೂನಿನ ನಿಬಂಧನೆಗಳ ಅಡಿಯಲ್ಲಿ ತಕ್ಷಣದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅದು ಒತ್ತಾಯಿಸಿದೆ.
ಸಭಾಪತಿಗಳಿಗೂ ದೂರು
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ (Chief secretary) ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗ ಸಭಾಪತಿಗಳಿಗೆ ದೂರು ನೀಡಿದೆ. ರವಿಕುಮಾರ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧವೂ ಇದೇ ರೀತಿ ಮಾತನಾಡಿದ್ದರು. ವಿಧಾನ ಪರಿಷತ್‌ ಸ್ಥಾನದಿಂದ ರವಿಕುಮಾರ ಅವರನ್ನು ವಜಾಗೊಳಿಸಿ ಎಂದು ಒತ್ತಾಯಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement