ಗ್ರೀನ್ ಆಸ್ಕರ್ – ಆಶ್ಡನ್‌ ಪ್ರಶಸ್ತಿ : ಸೆಲ್ಕೋ ಸಾಧನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ

ಬೆಂಗಳೂರು: ಈಚೆಗಷ್ಟೇ ಇಂಗ್ಲೆಂಡಿನ ಪ್ರತಿಷ್ಠಿತ ಗ್ರೀನ್ ಆಸ್ಕರ್ – ಆಶ್ಡನ್‌ ಜಾಗತಿಕ ಪ್ರಶಸ್ತಿಯಿಂದ ವಿಶ್ವದಲ್ಲಿಯೇ 3ನೇ ಸಲ ಗುರುತಿಸಲ್ಪಟ್ಟ ಭಾರತದ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಪ್ರಹ್ಲಾದ ಜೋಶಿ ಶ್ಲಾಘಿಸಿದ್ದಾರೆ ಹಾಗೂ ಸಂಸ್ಥೆಯ ಈ ಹಿರಿಮೆಗೆ ಅಭಿನಂದಿಸಿದ್ದಾರೆ.
ವಿಕೇಂದ್ರೀಕೃತ ಸೌರ ವಿದ್ಯುತ್ ಬಳಕೆಯಿಂದ ಬಡತನ ನಿವಾರಿಸುವಲ್ಲಿ ಸೆಲ್ಕೋ ಸಂಸ್ಥೆಯ ನಿಲುವು ಹಾಗೂ ಕಳೆದ 3 ದಶಕಗಳಲ್ಲಿ ಸಂಸ್ಥೆ ಸಾಗುತ್ತಿರುವ ರೀತಿಯನ್ನು ಪ್ರಸ್ತಾಪಿಸಿದ ಅವರು, ಮಂಗಳವಾರ (ಜುಲೈ 8) ದೆಹಲಿಯಲ್ಲಿ ತಮ್ಮ ಕಚೇರಿಯಲ್ಲಿ ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಹಾಗೂ ಡಿಜಿಎಂ ಗುರುಪ್ರಕಾಶ ಶೆಟ್ಟಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ  ಮಾತನಾಡಿದ ಮೋಹನ ಹೆಗಡೆ ಅವರು, ಸೆಲ್ಕೋ ಸಂಸ್ಥೆಯ ಮೂಲ ಚಿಂತನೆಯೆಂದರೆ, ಜೀವನಾಧಾರ ಉತ್ಪನ್ನಗಳು ಕೌಶಲ್ಯಾಧಾರಿತವಾಗಿ ಸೌರ ವಿದ್ಯುತ್ತಿನಿಂದ ಅಥವಾ ಪರ್ಯಾಯ ಶಕ್ತಿಯಿಂದ ನಡೆಯುವಂತಾಗಿ ವಿದ್ಯುತ್ ಉಳಿತಾಯವಾಗಬೇಕು ಹಾಗೂ ಇದನ್ನು ಬಳಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬುದಾಗಿದೆ ಎಂದು ಹೇಳಿದರು. ಅಲ್ಲದೆ, ಇದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಈ ಕುರಿತಾದ ಸಾಧ್ಯತೆಯ ವರದಿಯನ್ನು ಅವರು ಸಚಿವರಿಗೆ ನೀಡಿದರು.

ಪ್ರಮುಖ ಸುದ್ದಿ :-   ಮೈಯಲ್ಲಿ ಹೊಕ್ಕಿದ್ದ ದೆವ್ವ ಬಿಡಿಸಲು ಥಳಿತ ; ಮಹಿಳೆ ಸಾವು

ಇದನ್ನು ಮೆಚ್ಚಿದ ಸಚಿವರು ಈ ರೀತಿಯ ಕೌಶಲ್ಯಾಧಾರಿತವಾದ ಉತ್ಪನ್ನಗಳ ಬಗ್ಗೆ ಹಾಗೂ ಸರ್ಕಾರದ ಬೇರೆ ಬೇರೆ ಯೋಜನೆಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಸ್ತೃತವಾದ ವರದಿ ನೀಡುವಂತೆ ಸಲಹೆ ನೀಡಿದರು. ಅವರು ಸಂಸ್ಥೆಯ ಸಂಸ್ಥಾಪಕ ಹರೀಶ ಹಂದೆ ಅವರ ವೈಜ್ಞಾನಿಕ ದೃಷ್ಟಿಕೋನ ಹಾಗೂ ದೂರ ದೃಷ್ಟಿಯ ಚಿಂತನೆಗಳನ್ನು ಶ್ಲಾಘಿಸಿದರು. ಸೆಲ್ಕೋಕ್ಕೆ ಸಂದ ಪ್ರಶಸ್ತಿ ನಮ್ಮ ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಅಭಿಮಾನದ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಕ್ಷೇತ್ರದ ಸ್ವಾವಲಂಬಿಯಾಗಿಸುವ ಧ್ಯೇಯ ಹಾಗೂ ಆತ್ಮನಿರ್ಭರ ತತ್ವಕ್ಕೆ ಸೆಲ್ಕೋ ಕೆಲಸ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement