
ಶಿರಸಿ: ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಶ್ರಮದಿಂದ ರಚಿಸಿದ್ದಾರೆ. ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ ವಾಗುವುದರಲ್ಲಿ ಸಂಶಯವಿಲ್ಲ. ಎಂದು ಖ್ಯಾತ ಪತ್ರಕರ್ತ, ಅಂಕಣಕಾರ ರಾಜು ಅಡ್ಕಳ್ಳಿ ಹೇಳಿದರು.
ಅವರು ಬೆಂಗಳೂರಿನ ಆನಂದ ರಾವ್ ವೃತ್ತದ ಲೆಕ್ಕಾಧಿಕಾರಿಗಳ ಸಂಘದಲ್ಲಿ ವಿಶ್ವಾಭಿಗಮನಮ್ ಯಕ್ಷನೃತ್ಯ, ಸಾಹಿತಿ, ಪ್ರಸಂಗಕರ್ತ ದಿನೇಶ ಉಪ್ಪೂರ ಅವರಿಗೆ ಸನ್ಮಾನ, ಯಕ್ಷಗಾನ ಶಾಸ್ತ್ರೀಯವೇ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅವರ ಈ ಕೃತಿಗೆ ಸಮ್ಮಾನ ಕೂಡ ದೊರೆತಿರುವುದು ಸಂತಸದ ವಿಷಯವಾಗಿದೆ ಹಾಗೂ ಇಂತಹ ಸಂವಾದ ಕಾರ್ಯಕ್ರಮ ಏರ್ಪಡಿಸುವುದು ಸ್ತುತ್ಯಾರ್ಹ ಎಂದು ಹೇಳಿದರು. ಅಶೋಕ ಹಾಸ್ಯಗಾರ ಅವರು ಸ್ವಚ್ಛ, ಪ್ರಾಮಾಣಿಕ, ಬದ್ಧತೆಯುಳ್ಳ ಸಂಪಾದಕರಾಗಿದ್ದರು. ಸನ್ಮಾನಿತ ದಿನೇಶ ಉಪ್ಪೂರ ಅವರ ಪ್ರವಾಸ ಕಥನ, ಕಥಾ ಸಂಕಲನದ ಕುರಿತು ಮಾತನಾಡಿದ ಅವರು, ಅವರಿಗೆ ಸಿಗಬೇಕಾದ ಮನ್ನಣೆ ಸಿಗದಿರುವುದು ಬೇಸರ ಎಂದರು.
ಸಾಹಿತಿ ಗಿಂಡಿಮನೆ ಮೃತ್ಯುಂಜಯ ಮಾತನಾಡಿ, ದಿನೇಶ ಉಪ್ಪೂರ ಅವರ ಪ್ರಸಂಗ ಸಾಹಿತ್ಯದಲ್ಲಿಯ ಛಂದಸ್ಸು, ಮಟ್ಟು, ರಸಗಳ ಕುರಿತು ಮಾತನಾಡಿದರು. ಅವರ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಚಂದ್ರನಖಿ ಪ್ರಸಂಗವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಅಪರೂಪದ ರಾಗಗಳಾದ ಮೇಷಾಳೆ, ಹುಸೇನಿ ಗಳಂತಹ ಅಪರೂಪದ ರಾಗಗಳನ್ನು ಬಳಸಿ ಪ್ರಸಂಗ ರಚಿಸಿದ ಅವರ ಪಾಂಡಿತ್ಯವನ್ನು ಶ್ಲಾಘಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ, ಸಾವಿರಾರು ಯಕ್ಷಗಾನ ತಾಳಮದ್ದಳೆಗಳ ಆಡಿಯೋ ವಿಡಿಯೋಗಳನ್ನು ಸಂರಕ್ಷಿಸಿ ಡಿಜಿಟೈಸ್ ಮಾಡಿದ ದಿನೇಶ ಉಪ್ಪೂರ ಅವರ ಸಾಹಸ ಕಾರ್ಯ ಯಾವ ವಿಶ್ವವಿದ್ಯಾಲಯ, ಅಕಾಡೆಮಿ ಮಾಡುವ ಕೆಲಸಗಳಿಗೂ ಕಡಿಮೆ ಇಲ್ಲ ಎಂದು ಹೇಳಿದರು.
ನಂತರ ನಡೆದ ಯಕ್ಷಗಾನ ಶಾಸ್ತ್ರೀಯವೇ ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಹಾಸ್ಯಗಾರ ಅವರು ಯಕ್ಷಗಾನದ ಅಂಗಗಳಾದ ಚೌಕಿಮನೆ, ಸಭಾ ಲಕ್ಷ್ಮಣ, ನಾಟಕ, ಪ್ರಕರಣ, ಅಂಕ, ಪ್ರಹಸನ, ವ್ಯಾಯೋಗ, ಸಮವಕಾರ ಮುಂತಾದವುಗಳು ಹಾಗೂ ಅವುಗಳ ಶಾಸ್ತ್ರೀಯತೆಯ ಕುರಿತು ಆಧಾರಯುತವಾಗಿ ವಿವರಿಸಿದರು. ಯಕ್ಷಗಾನ ಯಾಕೆ ಶಾಸ್ತ್ರೀಯ ಎಂಬುದನ್ನು ನಿರೂಪಿಸಿದರು. ಸಂವಾದದಲ್ಲಿ ಭಾಗಿಯಾಗಿದ್ದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ, ರವಿ ಮಡೋಡಿ, ಡಾ. ಪಿ. ಕೆ ದೀಕ್ಷಿತ ಮುಂತಾದವರ ಎತ್ತಿದ ಸಂದೇಹಗಳಿಗೆ ಉತ್ತರವನ್ನು ನೀಡಿದರು
ಕಾರ್ಯಕ್ರಮದ ಆರಂಭದಲ್ಲಿ ತುಳಸಿ ಹೆಗಡೆ ಅವರಿಂದ ಪ್ರಸ್ತುತಪಡಿಸಲಾದ ವಿಶ್ವಶಾಂತಿ ಸಂದೇಶದ ವಿಶ್ವಾಭಿಗಮನಮ್ ಪ್ರಸ್ತುತಿ, ಪ್ರಭುದ್ಧವಾದ ಅಭಿನಯದ ಯಕ್ಷ ನೃತ್ಯ ಸಭಿಕರಿಗೆ ಅಪಾರ ಸಂತೋಷವನ್ನು ನೀಡಿತು. ಕಾರ್ಯಕ್ರಮದಲ್ಲಿ ಪ್ರಸಂಗ ಕರ್ತ ಸಾಹಿತಿ ನಿವೃತ್ತ ಲೆಕ್ಕಾಧಿಕಾರಿ ದಿನೇಶ ಉಪ್ಪೂರ ಹಾಗೂ ಅಶೋಕ ಹಾಸ್ಯಗಾರವರನ್ನು ಸನ್ಮಾನಿಸಲಾಯಿತು.
ದಿನೇಶ ಉಪ್ಪೂರ ಮಾತನಾಡಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಹಾಗೂ ದಾಖಲೆಗಳ ಸಂಗ್ರಹಕ್ಕಾಗಿ ತಾವು ಪಡುತ್ತಿರುವ ಶ್ರಮ ವಿವರಿಸಿದರು. ಕಾರ್ಯಕ್ರಮವನ್ನು ಅಮರಾ ಕಾವ್ಯನಾಮದ ಅಣೆಕಟ್ಟು ಮಧುಸೂದನ ರಾವ್ ಪ್ರಸ್ತಾವನೆ ಮಾಡಿ, ನಿರೂಪಿಸಿದರು. ಎಲ್ ಎನ್ ಹೆಗಡೆ, ಸುಜಯ ನಾಗರಾಜ, ಟಿ. ಶ್ರೀಧರ್, ವಿಘ್ನೇಶ್ವರ ಶಾಸ್ತ್ರಿ ಮುಖ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದರಲ್ಲಿ ಗಣ್ಯರಾದ ಎಸ್ ಆರ್ ವಿಜಯಶಂಕರ್, ಉಮೇಶ ಶಿರೂರ್, ಗಾಯತ್ರಿ ರಾಘವೇಂದ್ರ, ಪ್ರಭಾಕರ ಗಂಗೊಳ್ಳಿ, ಸಿದ್ದಣ್ಣ ಸೊನ್ನದ, ಸಂಘದ ಹಿರಿಯ ಸದಸ್ಯರುಗಳಾದ ರಾಮಚಂದ್ರ ರೆಡ್ಡಿ, ಕೆಂಪೇಗೌಡ, ಉಲಿಗೆ ಸ್ವಾಮಿ, ಸುಧಾ, ಗೀತಾ ಹೆಗಡೆ, ಗೀತಾ ಸಭಾಹಿತ, ನಿತ್ಯಾನಂದಪ್ಪ, ಚರಣ್ ಕುಮಾರ್ ,ಎಸ್ ಜೆ ಕೃಷ್ಣಮೂರ್ತಿ, ವಿಶಾಲಾಕ್ಷಿ ಶರ್ಮ ,ಎಸ್ ಶಂಕರ್, ವಾಸುದೇವ ಕಾರಂತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ