
ಅಮರಾವತಿ: ಮೂರು ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ, ಆಂಧ್ರಪ್ರದೇಶ ಸರ್ಕಾರ ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದೆ. ಆಂಧ್ರ (Andhra Pradesh) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ (Nara Lokesh) ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಭೂಸ್ವಾಧೀನದ ವಿರುದ್ಧ ರೈತರ ಹೋರಾಟದ ನಂತರ 1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್ ಅನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಇದರ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೇಶ ಅವರು, ಈ ವಿಚಾರ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ಆಂಧ್ರಪ್ರದೇಶದಲ್ಲಿ ನೀವು ಏಕೆ ಜಾಗ ನೋಡಬಾರದು? ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇವೆ ಎಂದು ಅವರು ಏರೋಸ್ಪೇಸ್ ಉದ್ಯಮಿಗಳನ್ನು ಅಹ್ವಾನಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹಿಂತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
“ಈ ಭೂಮಿ ಬೆಂಗಳೂರಿನ ಬಳಿ ಇದೆ, ಸಕ್ರಿಯವಾಗಿ ಕೃಷಿ ಮಾಡಲಾಗುತ್ತಿದೆ ಮತ್ತು ಅನೇಕ ರೈತರ ಜೀವನೋಪಾಯಕ್ಕೆ ಆಧಾರವಾಗಿದೆ. ಅದಕ್ಕಾಗಿಯೇ ನಾವು ಸ್ವಾಧೀನವನ್ನು ಕೈಬಿಡಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು. ವಿಮಾನ ನಿಲ್ದಾಣದ ಬಳಿಯ ಹಸಿರು ವಲಯದಲ್ಲಿ ಭೂಮಿ ಇರುವುದರಿಂದ, ರೈತರು ಅದನ್ನು ಸ್ವಾಧೀನಪಡಿಸಿಕೊಳ್ಳದಂತೆ ಸರ್ಕಾರವನ್ನು ಒತ್ತಾಯಿಸಿದ್ದರು ಮತ್ತು ಯೋಜನೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.
“ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ. ಈ ಕಾರಣಕ್ಕಾಗಿ ಈ ಭೂಸ್ವಾಧೀನ ಮಾಡಲು ಉದ್ದೇಶಿಸಲಾಗಿತ್ತು. ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿಯನ್ನು ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡಲಾಗುತ್ತದೆ. ಜೊತೆಗೆ ಅಭಿವೃದ್ಧಿಪಡಿಸಿದ 50%ರಷ್ಟು ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಹೇಳಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ