ಕನ್ನಡ-ಕರ್ನಾಟಕದ ಬಗ್ಗೆ ಅವಹೇಳನ ; ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ

ಬೆಂಗಳೂರು: ಕರ್ನಾಟಕ (Karnataka) ಮತ್ತು ಕನ್ನಡ ಭಾಷಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 17 ರಂದು ಬೆಳಗ್ಗೆ 9:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಿದ್ದ ಟಿ-ಶರ್ಟ್ ತಲುಪಿಸಲು ವಿಳಾಸ ದೃಢೀಕರಣಕ್ಕಾಗಿ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಎಂಬವರು ಪಶ್ಚಿಮ ಬಂಗಾಳದ ಮಿಥುನ್ ಸರ್ಕಾರ್ ಎಂಬ ಗ್ರಾಹಕನಿಗೆ ಕರೆ ಮಾಡಿದ್ದಾರೆ.
ಈ ವೇಳೆ ವಿನಾಕಾರಣ ಕನ್ನಡದ ವಿಚಾರವಾಗಿ ಮಾತು ಆರಂಭಿಸಿದ್ದ ಮಿಥುನ್, “ನಾವು ಶೇ.70ರಷ್ಟು ಹಿಂದಿಯವರು ಕರ್ನಾಟಕದಲ್ಲಿದ್ದೇವೆ. ನಿಮ್ಮದು ಅತಿಯಾಗಿದೆ. ನಾವು ಇಲ್ಲಿಂದ ಹೋದರೆ ನೀವು ಕನ್ನಡದವರಿಗೆ ಟೊಮೆಟೋ ಖರೀದಿಸುವುದಕ್ಕೂ 10 ರೂಪಾಯಿ ಇರುವುದಿಲ್ಲ ಎಂದೆಲ್ಲ ಹೇಳಿದ್ದಾನೆ. ಆಗ ಡೆಲಿವರಿ ಎಕ್ಸಿಕ್ಯೂಟಿವ್ ನಿಮ್ಮ ಕರೆ ರೆಕಾರ್ಡ್‌ ಆಗುತ್ತಿದೆ, ಹಾಗೆಲ್ಲ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಇದಕ್ಕೆ ಆತ ನನ್ನ ಕಾಲ್ ರೆಕಾರ್ಡ್ ಮಾಡಿಕೋ, ನನ್ನ ಫೋನ್ ನಂಬರ್ ತೆಗೆದುಕೋ, ಬೇಗೂರು ನನ್ನ ವಿಳಾಸ, ನೀನು ಬಂದು ಭೇಟಿಯಾಗಿ ನಾನು ಬುಕ್ ಮಾಡಿರುವ ಆರ್ಡರ್ ಕೊಟ್ಟು ಹೋಗು” ಎಂದು ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತ ಆಡಿಯೋ ತುಣುಕು ಹಾಗೂ ಆರೋಪಿಯ ವಿಳಾಸಸಹಿತ ಡೆಲಿವರಿ ಎಕ್ಸಿಕ್ಯೂಟಿವ್ ದೂರು ನೀಡಿದ್ದು, ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯ ಫೋನ್ ನಂಬರ್ ಆಧರಿಸಿ‌ ಪತ್ತೆ ಹಚ್ಚಿ ಗುರುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ತ್ರಿಪುರದವರಾದ ಮಿಥುನ್ ಸರ್ಕಾರ್ ತಾನು ಒಂಬತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ, ಘಟನೆಯ ಸಮಯದಲ್ಲಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement