ಸಣ್ಣ ವ್ಯಾಪಾರಿಗಳಿಗೆ ರಿಲೀಫ್‌ | 3 ವರ್ಷದ ಬಾಕಿ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಜಿಎಸ್‌ಟಿ ನೋಟಿಸ್‌ ಪಡೆದ ಸಣ್ಣ ವ್ಯಾಪಾರಿಗಳಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಸಣ್ಣ ವ್ಯಾಪಾರಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ.
40 ಲಕ್ಷ ರೂ. ಮೇಲ್ಪಟ್ಟು ವ್ಯವಹಾರ ನಡೆಸಿದ ಸಣ್ಣ ವರ್ತಕರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್‌ ಜಾರಿ ಮಾಡಿದ್ದಕ್ಕೆ ಭಾರೀ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು, ಬುಧವಾರ ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ನೋಟಿಸ್‌ ಪಡೆದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ. ಈಗ ಕೊಟ್ಟಿರುವ ನೋಟೀಸ್ ಮೇಲೆ ವಸೂಲಾತಿ ಕ್ರಮ ಕೈಗೊಳ್ಳುವುದಿಲ್ಲ. ಆದರೆ ವರ್ತಕರು ಇನ್ಮುಂದೆ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೂರು ವರ್ಷಗಳ ಬಾಕಿ ವಸೂಲಾತಿಗೆ ನೋಟಿಸ್ ಕೊಟ್ಟಿದ್ದರು. ಅದನ್ನ ಮುಂದುವರಿಸುವುದಿಲ್ಲ. ಯುಪಿಐ ಅಡಿ 40 ಲಕ್ಷ ರೂ. ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್ಟಿ ನೊಟೀಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್‌ಟಿ ನೊಂದಣಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದು ಸ್ಪಷ್ಟಪಡಿಸಿದರು.
ವರ್ತಕರು ಜಿಎಸ್‌ಟಿ ನೋಂದಣಿಗೆ ಒಪ್ಪಿದ್ದಾರೆ. ಜಿಎಸ್‌ಟಿ ಗೊಂದಲಕ್ಕೆ ಸಹಾಯವಾಣಿ ತೆರೆಯುತ್ತೇವೆ. ಜಿಎಸ್‌ಟಿ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ವರ್ತಕರು ಯುಪಿಐ ಬಳಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ರಾಜ್ಯದಲ್ಲಿ 9 ಸಾವಿರ ವ್ಯಾಪಾರಿಗಳಿಗೆ ಕಳೆದ 3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳನ್ನು ನಡೆಸಲು ಕಾನೂನುಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ. ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ವ್ಯಾಪಾರಿಗಳ ನೆರವಿಗೆ ಸಹಾಯವಾಣಿ ಇದ್ದು, ಇದನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್‌ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ. ಜಿಎಸ್‌ಟಿ ನೋಟಿಸ್‌ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement