
ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ (stampede) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ತವ್ಯ ಲೋಪ ಆರೋಪದಲ್ಲಿಅಮಾನತು ಮಾಡಲಾಗಿದ್ದ ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ಒಬ್ಬರನ್ನು ಬಿಟ್ಟು ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ, ಡಿಸಿಪಿ ಶೇಖರ ಎಚ್.ಟಿ., ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎಎಸ್ಐ ಬಾಲಕೃಷ್ಣ ಹಾಗೂ ಇನ್ಸ್ಪೆಕ್ಟರ್ ಗಿರೀಶ ಅವರನ್ನು ಅಮಾನತು ಮಾಡಲಾಗಿತ್ತು, ಇದೀಗ ಈ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರ್ಕಾರ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಿತ್ತು. ಘಟನೆಯ ಕುರಿತು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗದೀಶ್ ಜಿ. ತನಿಖೆ ನಡೆಸಿದ್ದರು. ಇದಲ್ಲದೆ, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗ ರಚಿಸಿತ್ತು.

ನ್ಯಾಯಾಂಗ ಆಯೋಗ ಮತ್ತು ಮ್ಯಾಜಿಸ್ಟೀರಿಯಲ್ ಸಮಿತಿ ತನಿಖೆಯನ್ನು ಪೂರ್ಣಗೊಳಿಸಿ, ಕ್ರಮವಾಗಿ ಜುಲೈ 10 ಮತ್ತು 11 ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. ಅಧಿಕಾರಿಗಳು ತಮ್ಮ ಅಮಾನತು ರದ್ದುಗೊಳಿಸುವಂತೆ ಕೋರಿದ್ದರು. ಈಗ ಮರು ಪರಿಶೀಲನೆ ಬಳಿಕ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಐಜಿಪಿ ವಿಕಾಸಕುಮಾರ ವಿಕಾಸ ಅವರನ್ನು ಹೊರತುಪಡಿಸಿ, ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ವಿಕಾಸಕುಮಾರ ಅಮಾನತು ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿತ್ತು. ಅರ್ಜಿದಾರರನ್ನು ಪುನಃ ಕರ್ತವ್ಯಕ್ಕೆ ನಿಯೋಜಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ. ಪ್ರಕರಣ ಹೈಕೋರ್ಟ್ನಲ್ಲಿ ಇರುವ ಕಾರಣ ಐಜಿಪಿ ವಿಕಾಸಕುಮಾರ ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ