
ನವದೆಹಲಿ: ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಮಾತನಾಡಲು ಪಟ್ಟಿ ಮಾಡಲಾದ ಸಂದರಲ್ಲಿ ಶಶಿ ತರೂರ ಜೊತೆಗೆ ತಮ್ಮನ್ನು ಸೇರಿಸದ ಪಕ್ಷದ ನಿರ್ಧಾರವನ್ನು ಕಾಂಗ್ರೆಸ್ ಸಂಸದ ಮನೀಶ ತಿವಾರಿ ಪರೋಕ್ಷವಾಗಿ ಟೀಕಿಸಿದ್ದಾರೆ.
ಆಪರೇಷನ್ ಸಿಂಧೂರ ನಂತರ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ವಿವಿಧ ದೇಶಗಳಿಗೆ ಕಳಹಿಸಿದ ಸರ್ಕಾರದ ಸರ್ವಪಕ್ಷ ನಿಯೋಗಗಳಲ್ಲಿ ಮನೀಶ ತಿವಾರಿ ಮತ್ತು ಶಶಿ ತರೂರ್ ಇಬ್ಬರೂ ಇದ್ದರು.
ಆಪರೇಶನ್ ಸಿಂಧೂರ ಮೇಲಿನ ನಿರ್ಣಾಯಕ ಚರ್ಚೆಗೆ ಹಿರಿಯ ನಾಯಕರು ಹಾಗೂ ನಿರರ್ಗಳ ಭಾಷಣಕಾರರಾದ ಇಬ್ಬರನ್ನು ನೇಮಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿರುವುದು ಪಕ್ಷದೊಳಗಿನ ಆಂತರಿಕ ಘರ್ಷಣೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸೋಮವಾರ ಪ್ರಾರಂಭವಾದ ಚರ್ಚೆಗೆ ತಮ್ಮನ್ನು ಮತ್ತು ತರೂರ್ ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಅನ್ನು ಆನಂದಪುರ ಸಾಹಿಬ್ ಸಂಸದರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಪುರಬ್ ಔರ್ ಪಚ್ಚಿಮ್ (1970) ಚಿತ್ರದ ಪ್ರಸಿದ್ಧ ದೇಶಭಕ್ತಿ ಗೀತೆಯ ಸಾಲನ್ನು ತಿವಾರಿ ಕೂಡ ಹಂಚಿಕೊಂಡಿದ್ದಾರೆ.
ನಾನು ಆ ಸ್ಥಳದ ಪದ್ಧತಿಗಳನ್ನು ಪ್ರೀತಿಸುತ್ತೇನೆ, ನಾನು ಆ ಸ್ಥಳದ ಹಾಡುಗಳನ್ನು ಹಾಡುತ್ತೇನೆ, ನಾನು ಭಾರತದ ನಿವಾಸಿ, ನಾನು ಭಾರತದ ಕಥೆಗಳನ್ನು ಹೇಳುತ್ತೇನೆ-ಜೈ ಹಿಂದ್ (Hai preet jahaan ki reet sada, main geet wahaan ke gaata hoon, Bharat ka rehne waala hoon, Bharat ki baat sunata hoon. Jai Hind) ” ಎಂದು ಕಾಂಗ್ರೆಸ್ ಸಂಸದರು ಬರೆದಿದ್ದಾರೆ.
ಸಂಸತ್ತಿನಲ್ಲಿ ವರದಿಗಾರರು ತಮ್ಮ ನಿಗೂಢ ಟ್ವೀಟ್ ಬಗ್ಗೆ ಕೇಳಿದಾಗ, ತಿವಾರಿ ಸ್ಪಷ್ಟ ಪ್ರತಿಕ್ರಿಯೆ ನೀಡಿ “‘ನನ್ನ ಮೌನಗಳನ್ನು ನೀವು ಅರ್ಥಮಾಡಿಕೊಳ್ಳದಿದ್ದರೆ, ನೀವು ನನ್ನ ಮಾತುಗಳನ್ನು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ’ ಎಂಬ ಮಾತಿದೆ” ಎಂದು ಮಾಜಿ ಕೇಂದ್ರ ಸಚಿವರಾದ ಮನೀಶ ತಿವಾರಿ ಮಾರ್ಮಿಕವಾಗಿ ಹೇಳಿದರು.
ಮನೀಶ ತಿವಾರಿ ಚರ್ಚೆಯಲ್ಲಿ ಭಾಗವಹಿಸಲು ಬಯಸಿದ್ದರು ಮತ್ತು ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸಿ ವಿಪಕ್ಷದ ನಾಯಕ (ರಾಹುಲ್ ಗಾಂಧಿ) ಅವರ ಕಚೇರಿಗೆ ಮೇಲ್ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಕಾಂಗ್ರೆಸ್ ಅವರನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವ ಸಂಸದರ ಪಟ್ಟಿಯಲ್ಲಿ ಸೇರಿಸದೇ ಇರಲು ನಿರ್ಧರಿಸಿತು. ನಿಯೋಗದ ಭಾಗವಾಗಿದ್ದ ಕಾಂಗ್ರೆಸ್ ಸಂಸದ ಅಮರ ಸಿಂಗ್ ಅವರನ್ನು ಸಹ ಚರ್ಚೆಯಲ್ಲಿ ಮಾತನಾಡಲು ಕಾಂಗ್ರೆಸ್ ಆಯ್ಕೆ ಮಾಡಲಿಲ್ಲ.
ಶಶಿ ತರೂರ್ ಅವರ ವಿಷಯದಲ್ಲಿ, ಕಾಂಗ್ರೆಸ್ ಕೇರಳ ಸಂಸದರನ್ನು ಚರ್ಚೆಯ ಸಮಯದಲ್ಲಿ ಮಾತನಾಡಲು ಸಂಪರ್ಕಿಸಿತ್ತು. ಆದಾಗ್ಯೂ, ತರೂರ್ ಆಹ್ವಾನವನ್ನು ನಿರಾಕರಿಸಿದರು, ಆಪರೇಷನ್ ಸಿಂಧೂರ ಟೀಕೆಯಲ್ಲಿ ಪಕ್ಷದ ಸಾಲಿಗೆ ಬದ್ಧರಾಗಲು ಸಾಧ್ಯವಾಗುವುದಿಲ್ಲ ಎಂದು ತರೂರ್ ಹೇಳಿದರು ಎಂದು ಮೂಲಗಳು ತಿಳಿಸಿವೆ. ವಿದೇಶ ಪ್ರವಾಸ ಕೈಗೊಂಡಾಗ ಆಪರೇಷನ್ ಸಿಂಧೂರ ಯಶಸ್ವಿಯಾಯಿತು ಮತ್ತು ಅದರಿಂದ ವಿಮುಖರಾಗಿ ಪಕ್ಷದ ನಿಲುವಿಗೆ ಬದಲಾಗುವುದು ಕಷ್ಟಸಾಧ್ಯ ಎಂದು ತರೂರ್ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ. . ಸಂಸತ್ತಿನ ಹೊರಗೆ ಮಾಧ್ಯಮಗಳು ಈ ಬಗ್ಗೆ ಅವರನ್ನು ಕೇಳಿದಾಗ, ಅವರು ನಗುತ್ತಾ, “ಮೌನವ್ರತ” ಎಂದ ಉತ್ತರಿಸಿದರು. ಚರ್ಚೆಯ ಸಮಯದಲ್ಲಿ ತರೂರ್ ಪಕ್ಷದ ನಿಲುವಿಗೆ ಬದ್ಧರಾಗಲು ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ ಮೇಲಿನ ಚರ್ಚೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಾಗ, ಅದರ ಆಂತರಿಕ ಒತ್ತಡಗಳು ಸುದ್ದಿಗಳಲ್ಲಿ ಬರುತ್ತಿವೆ ಮತ್ತು ಇದು ಪ್ರಮುಖ ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಪಕ್ಷದ ಹಿರಿಯ ನಾಯಕ ಶಶಿ ತರೂರ್ ಚರ್ಚೆಯಲ್ಲಿ ಏಕೆ ಮಾತನಾಡುತ್ತಿಲ್ಲ ಎಂಬ ಗದ್ದಲದ ನಡುವೆ, ಮತ್ತೊಬ್ಬ ಸಂಸದರ ಸಾಮಾಜಿಕ ಮಾಧ್ಯಮ ಪೋಸ್ಟ್ ಕಾಂಗ್ರೆಸ್ ಅನ್ನು ಕೆಂಪಾಗಿಸಿದೆ ಮತ್ತು ಬಿಜೆಪಿಗೆ ವಾಗ್ದಾಳಿ ನಡೆಸಲು ಹೊಸ ಮದ್ದುಗುಂಡುಗಳನ್ನು ನೀಡಿದೆ.
ತರೂರ್ ಇತ್ತೀಚೆಗೆ ತಮ್ಮ “ಮೊದಲ ನಿಷ್ಠೆ” ರಾಷ್ಟ್ರದೊಂದಿಗೆ ಇದೆ ಎಂದು ಹೇಳಿದರು. “ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಒಂದು ಸಾಧನವಾಗಿದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ, ನೀವು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ, ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದು ಎಂದು ಹೇಳಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ