
ನವದೆಹಲಿ : ಟರ್ಕಿಯ ವಿಮಾನಯಾನ ಸೇವಾ ಸಂಸ್ಥೆಯಾದ ‘ಸೆಲೆಬಿ ಏವಿಯೇಷನ್’ (Celebi Aviation) ಭಾರತದ ವಿಮಾನ ನಿಲ್ದಾಣಗಳಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಭಾರತ-ಪಾಕಿಸ್ತಾನ ನಡುವಿನ ‘ಆಪರೇಷನ್ ಸಿಂಧೂರ’ ಸೇನಾ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಟರ್ಕಿ ಸೇನಾ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದೀಗ ಈ ಕುರಿತು ಮೌನ ಮುರಿದಿರುವ ಸೆಲೆಬಿ ಏವಿಯೇಷನ್ ಅಧ್ಯಕ್ಷರಾದ ಕಾನನ್ ಸೆಲೆಬಿಯೊಗ್ಲು, ಭಾರತ ಸರ್ಕಾರ ದಿಢೀರ್ ಆಗಿ ತಮ್ಮ ಕಂಪನಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತು, ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು, ಉದ್ಯೋಗಿಗಳನ್ನು ವರ್ಗಾಯಿಸಲಾಯಿತು ಮತ್ತು ಒಪ್ಪಂದಗಳನ್ನು ರದ್ದುಗೊಳಿಸಲಾಯಿತು ಎಂದು ಹೇಳಿದ್ದಾರೆ. ಇದರಿಂದಾಗಿ ಕೇವಲ ಒಂದೇ ದಿನದಲ್ಲಿ ಕಂಪನಿಯ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು ₹4,700 ಕೋಟಿಗೂ ಅಧಿಕ) ಮೌಲ್ಯದ ಸಂಪತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ಲೂಮ್‌ಬರ್ಗ್ (Bloomberg) ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾನನ್ ಸೆಲೆಬಿಯೊಗ್ಲು, 2000ದಿಂದ ಭಾರತದಲ್ಲಿ “ಎಳೆ ಎಳೆಯಾಗಿ, ಅತ್ಯಂತ ಜಾಗರೂಕತೆಯಿಂದ” ತಾವು ಕಟ್ಟಿಬೆಳೆಸಿದ್ದ ಮಾರುಕಟ್ಟೆಯನ್ನು ಭಾರತ ಸರ್ಕಾರದ ಈ ಒಂದು ನಿರ್ಧಾರ ಒಂದೇ ದಿನದಲ್ಲಿ ಧೂಳೀಪಟ ಮಾಡಿದೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ನಾಲ್ಕು ದಿನಗಳ ಸಶಸ್ತ್ರ ಸಂಘರ್ಷ ‘ಆಪರೇಷನ್ ಸಿಂಧೂರ’ ವೇಳೆ, ಟರ್ಕಿಯು ಬಹಿರಂಗವಾಗಿಯೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಹಾಗೂ ಸೇನಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಬೆಂಬಲ ನೀಡಿತ್ತು. ಟರ್ಕಿ ತಯಾರಿತ 350ಕ್ಕೂ ಹೆಚ್ಚು ‘ಬೈರಕ್ತಾರ್ ಟಿಬಿ2’ (Bayraktar TB2) ಮತ್ತು ‘ಅಸಿಸ್‌ಗಾರ್ಡ್ ಸೋಂಗಾರ್’ (Asisguard Songar) ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಗಿತ್ತು. ಇದರ ಬೆನ್ನಲ್ಲೇ ಭಾರತ ಸರ್ಕಾರವು ಟರ್ಕಿ ಕಂಪನಿಯಾದ ಸೆಲೆಬಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಒಂದೇ ದಿನದಲ್ಲಿ ಎಲ್ಲವೂ ಮುಕ್ತಾಯ!
2025ರ ಮೇ ತಿಂಗಳಲ್ಲಿ (ಆಪರೇಷನ್ ಸಿಂಧೂರ ನಡೆದ ಒಂದು ವಾರದ ನಂತರ) ಭಾರತ ಸರ್ಕಾರ ಈ ಕಠಿಣ ಕ್ರಮ ಕೈಗೊಳ್ಳುವ ಮೊದಲು, ಸೆಲೆಬಿ ಸಂಸ್ಥೆಯು ಭಾರತೀಯ ವಿಮಾನಯಾನ ರಂಗದಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಿತ್ತು. ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ 9 ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಇದು ಗ್ರೌಂಡ್ ಹ್ಯಾಂಡ್ಲಿಂಗ್ (ವಿಮಾನ ನಿಲ್ದಾಣದ ನೆಲದ ಮೇಲಿನ ನಿರ್ವಹಣೆ) ಜವಾಬ್ದಾರಿಯನ್ನು ಹೊತ್ತಿತ್ತು. ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಾರ್ಷಿಕವಾಗಿ ಸುಮಾರು 58,000 ವಿಮಾನಗಳು ಮತ್ತು 5,40,000 ಟನ್ ಸರಕುಗಳನ್ನು (ಕಾರ್ಗೊ) ಈ ಸಂಸ್ಥೆಯೇ ನಿರ್ವಹಿಸುತ್ತಿತ್ತು.
“ಕೇವಲ ಒಂದೇ ದಿನದಲ್ಲಿ ಸರ್ಕಾರ ನಮ್ಮ 10,000 ಉದ್ಯೋಗಿಗಳನ್ನು ಮತ್ತೊಂದು ಕಂಪನಿಗೆ ವರ್ಗಾಯಿಸಿತು. ನಾವು ಸೃಷ್ಟಿಸಿದ್ದ ಸುಮಾರು 400-500 ಮಿಲಿಯನ್ ಡಾಲರ್ ಮೌಲ್ಯ ಒಂದೇ ದಿನದಲ್ಲಿ ಶೂನ್ಯಕ್ಕೆ ಇಳಿಯಿತು,” ಎಂದು ಸೆಲೆಬಿಯೊಗ್ಲು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.
ಹಣಕಾಸಿನ ನಷ್ಟಕ್ಕಿಂತ ಹೆಚ್ಚಾಗಿ, ದಶಕಗಳ ಕಾಲ ಶ್ರಮಪಟ್ಟು ಕಟ್ಟಿದ ಸಂಸ್ಥೆ ಹೀಗಾಗಿದ್ದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. “ಇದರ ವಿತ್ತೀಯ ಮೌಲ್ಯವನ್ನು ಪಕ್ಕಕ್ಕಿಟ್ಟು ನೋಡುವುದಾದರೆ… ಇದು ನಿಜಕ್ಕೂ ಅತ್ಯಂತ ಜಾಗರೂಕತೆಯಿಂದ, ಎಳೆ ಎಳೆಯಾಗಿ ಹೆಣೆದು ಕಟ್ಟಿದ ಸಂಸ್ಥೆಯಾಗಿತ್ತು ಎಂದು ಹೇಳಿದ್ದಾರೆ.
ತಾವು “ಭಾರತದ ದೊಡ್ಡ ಅಭಿಮಾನಿ” ಎಂದು ಬಣ್ಣಿಸಿಕೊಂಡ ಸೆಲೆಬಿಯೊಗ್ಲು, ಭಾರತ ತಮಗೆ “ಎರಡನೇ ತಾಯ್ನಾಡು” ಇದ್ದಂತೆ ಎಂದಿದ್ದಾರೆ. “ಹೀಗಾಗಿಯೇ ಈ ಪರಿಸ್ಥಿತಿ ನಮಗೆ ತೀವ್ರ ಆಘಾತ ನೀಡಿತು. ಇದು ನನಗೆ ತುಂಬಾ ಬೇಸರ ತರಿಸಿದೆ,” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಭಾರತದಂತಹ ಬೃಹತ್ ಮತ್ತು ಸಂಕೀರ್ಣ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವ ಸವಾಲುಗಳನ್ನು ಒಪ್ಪಿಕೊಂಡ ಅವರು, ಅಲ್ಲಿ ಉದ್ಯಮ ನಡೆಸುವುದು ಸಹಜವಾಗಿಯೇ ಕಷ್ಟಗಳಿಂದ ಕೂಡಿರುತ್ತದೆ ಎಂದಿದ್ದಾರೆ. “ಏಕೆಂದರೆ, ಎಲ್ಲದರ ನಂತರವೂ ಭಾರತ ಒಂದು ವಿಭಿನ್ನ ದೇಶ. ನಮ್ಮ ನಡುವೆ ಕೆಲವು ಸಾಮ್ಯತೆಗಳಿದ್ದರೂ, ಅಲ್ಲಿ ಸಹಜವಾಗಿಯೇ ಸಾಕಷ್ಟು ಸಮಸ್ಯೆಗಳು ಮತ್ತು ತೊಂದರೆಗಳು ಇವೆ,” ಎಂದು ಅವರು ತಿಳಿಸಿದ್ದಾರೆ.
ಭಾರತವು ಸೆಲೆಬಿ ಸಂಸ್ಥೆಯ ಭದ್ರತಾ ಅನುಮತಿ ರದ್ದುಗೊಳಿಸಿದ್ದು ಏಕೆ?
ಭಾರತವು ಸೆಲೆಬಿ ಸಂಸ್ಥೆಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಲು ‘ಆಪರೇಷನ್ ಸಿಂಧೂರ’ ಪ್ರಮುಖ ಕಾರಣವಾಗಿತ್ತು. 2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು 26 ನಾಗರಿಕರನ್ನು ಗುಂಡಿಟ್ಟು ಕೊಂದಿದ್ದರು. ಈ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಮೇ 6 ರಂದು ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) ಒಳಗಿರುವ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಇದು ಎರಡೂ ದೇಶಗಳ ನಡುವೆ ನಾಲ್ಕು ದಿನಗಳ ಸಶಸ್ತ್ರ ಸಂಘರ್ಷಕ್ಕೆ (ಆಪರೇಷನ್ ಸಿಂಧೂರ) ಕಾರಣವಾಗಿತ್ತು.
ಈ ಸಂಘರ್ಷದ ಸಮಯದಲ್ಲಿ, ಟರ್ಕಿ ದೇಶವು ಬಹಿರಂಗವಾಗಿಯೇ ಪಾಕಿಸ್ತಾನದ ಬೆನ್ನಿಗೆ ನಿಂತಿತ್ತು. ಟರ್ಕಿ ತಯಾರಿತ 350 ಕ್ಕೂ ಹೆಚ್ಚು ಅತ್ಯಾಧುನಿಕ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದ್ದು, ಇವುಗಳನ್ನು ಭಾರತೀಯ ಸೇನೆ ಮತ್ತು ನಾಗರಿಕ ನೆಲೆಗಳ ಮೇಲೆ ದಾಳಿ ಮಾಡಲು ಬಳಸಲಾಗಿತ್ತು.
ಇಷ್ಟೇ ಅಲ್ಲದೆ, ಪಹಲ್ಗಾಮ್ ದಾಳಿ ನಡೆದ ನಂತರ ಮತ್ತು ಭಾರತೀಯ ಪಡೆಗಳು ಆಪರೇಷನ್ ಸಿಂಧೂರ ಆರಂಭಿಸುವ ಕೆಲವು ವಾರಗಳ ಮುಂಚೆಯೇ, ಟರ್ಕಿಯ ವಾಯುಪಡೆಯ ಸಿ-130 (C-130) ವಿಮಾನ ಮತ್ತು ಯುದ್ಧನೌಕೆಯೊಂದು ಪಾಕಿಸ್ತಾನವನ್ನು ತಲುಪಿತ್ತು. ಆಪರೇಷನ್ ಸಿಂಧೂರ್ ವೇಳೆ ಇಬ್ಬರು ಟರ್ಕಿ ಸೇನಾ ಸಿಬ್ಬಂದಿ ಕೂಡ ಹತರಾಗಿದ್ದರು. ಇದು ಟರ್ಕಿ ದೇಶವು ಪಾಕಿಸ್ತಾನಕ್ಕೆ ಕೇವಲ ಡ್ರೋನ್‌ಗಳನ್ನು ಮಾತ್ರ ನೀಡದೆ, ಆ ಡ್ರೋನ್‌ಗಳನ್ನು ಆಪರೇಟ್ ಮಾಡುವ ತರಬೇತಿ ಪಡೆದ ಸಿಬ್ಬಂದಿಯನ್ನೂ ಕಳುಹಿಸಿ ಭಾರತದ ವಿರುದ್ಧದ ಯುದ್ಧದಲ್ಲಿ ನೇರವಾಗಿ ಸಹಾಯ ಮಾಡಿದೆ ಎಂಬುದನ್ನು ಬಹಿರಂಗಪಡಿಸಿತ್ತು.
ಈ ಹಿನ್ನೆಲೆಯಲ್ಲಿ, ಮೇ 2025 ರಲ್ಲಿ ಸೆಲೆಬಿ ಸಂಸ್ಥೆಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದ ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು, ‘ರಾಷ್ಟ್ರೀಯ ಭದ್ರತಾ ಕಾಳಜಿ’ಯೇ ಇದಕ್ಕೆ ಮುಖ್ಯ ಕಾರಣ ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು.
ಭಾರತದ ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್, ಕಾರ್ಗೊ ಸೇವೆಗಳು, ಕಾರ್ಗೊ ಭದ್ರತಾ ತಪಾಸಣೆ, ಪ್ರಯಾಣಿಕರ ದಾಖಲೆಗಳ ಪರಿಶೀಲನೆ ಮತ್ತು ಲಾಜಿಸ್ಟಿಕ್ಸ್ ಸಮನ್ವಯದಂತಹ ಪ್ರಮುಖ ಮತ್ತು ಸೂಕ್ಷ್ಮ ಜವಾಬ್ದಾರಿಗಳನ್ನು ಸೆಲೆಬಿ ಇಂಡಿಯಾ ನಿರ್ವಹಿಸುತ್ತಿತ್ತು. ವಿಮಾನ ನಿಲ್ದಾಣದ ವಲಯಗಳು ತೀವ್ರ ಭದ್ರತೆಯಿಂದ ಕೂಡಿರುವ ಮತ್ತು ನಿಯಂತ್ರಿಸಲ್ಪಡುವ ಪ್ರದೇಶಗಳಾಗಿರುವುದರಿಂದ, ಇಂತಹ ಕಡೆ ವಿದೇಶಿ ಸಂಸ್ಥೆಗೆ ಅವಕಾಶ ನೀಡುವುದು ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ ತಂದೊಡ್ಡಬಹುದು ಎಂದು ಭಾರತದಲ್ಲಿ ತೀವ್ರ ಆತಂಕ ವ್ಯಕ್ತವಾಗಿತ್ತು.
ಭಾರತ ಸರ್ಕಾರದ ಈ ನಿರ್ಧಾರದ ವಿರುದ್ಧ ಸೆಲೆಬಿ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್, ಜುಲೈನಲ್ಲಿ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು. “ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ, ನಂತರ ವಿಷಾದಿಸುವುದಕ್ಕಿಂತ ಮುಂಜಾಗ್ರತೆ ವಹಿಸುವುದೇ ಲೇಸು (better to be safe than sorry),” ಎಂದು ನ್ಯಾಯಾಲಯ ಹೇಳಿತ್ತು.
ತಮಗೆ ಟರ್ಕಿ ಸರ್ಕಾರದೊಂದಿಗೆ ಯಾವುದೇ ನೇರ ಸಂಬಂಧವಿಲ್ಲ ಎಂದು ಸೆಲೆಬಿ ಸಂಸ್ಥೆ ವಾದಿಸಿತ್ತಲ್ಲದೆ, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರ ಪುತ್ರಿ ಸುಮೇಯೆ ಎರ್ಡೋಗನ್ ಈ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ ಎಂಬ ಆರೋಪಗಳನ್ನೂ ತಳ್ಳಿಹಾಕಿತ್ತು. ಆದಾಗ್ಯೂ, ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ ನಂತರ, ರಾಷ್ಟ್ರೀಯ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿರುವ ಭಾರತದ ವಿಮಾನ ನಿಲ್ದಾಣಗಳಲ್ಲಿ ಟರ್ಕಿ ಮೂಲದ ಕಂಪನಿಯೊಂದು ಮುಂದುವರಿಯುವ ಸಾಧ್ಯತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದವು



ನಿಮ್ಮ ಕಾಮೆಂಟ್ ಬರೆಯಿರಿ