‘ಹಿಂದೂ ಧರ್ಮ ನೋಂದಣಿಯಾಗಿಲ್ಲ’…: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನನ್ನು ತಾನು ನೋಂದಾಯಿಸಿಕೊಳ್ಳಬೇಕು ಹಾಗೂ ತನ್ನ ಹಣಕಾಸು ಸೇರಿದಂತೆ ಇತರೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಬಹಿರಂಗ ಪತ್ರಕ್ಕೆ ತಾನು “ಪ್ರತಿಕ್ರಿಯಿಸುವುದಿಲ್ಲ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ (ಸರಸಂಘಚಾಲಕ) ಮೋಹನ ಭಾಗವತ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಇದೆಲ್ಲವೂ ಕೇವಲ ರಾಜಕೀಯ… ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ನಾವು ಇಂತಹ ಪರಿಸ್ಥಿತಿಗಳನ್ನು ಎದುರಿಸಿಯೇ ಬಂದಿದ್ದೇವೆ ಮತ್ತು ನಮಗೆ ಇದು ಅಭ್ಯಾಸವಾಗಿದೆ. ಒಂದು ವೇಳೆ ಇಂತಹವುಗಳು ನಡೆಯದೇ ಇದ್ದರೆ, ನಮಗೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ” ಎಂದು ಲೇವಡಿ ಮಾಡಿದರು.
ಸಂಘ ರಹಸ್ಯವಾಗಿ ಕೆಲಸ ಮಾಡುತ್ತಿಲ್ಲ:
ಸಂಘವು ಮುಕ್ತವಾಗಿ ಕೆಲಸ ಮಾಡುತ್ತದೆ ಮತ್ತು ಇದರಲ್ಲಿ ಯಾವುದೇ ರಹಸ್ಯವಿಲ್ಲ ಎಂದು ಪ್ರತಿಪಾದಿಸಿದ ಭಾಗವತ್, “ದೇಶದಲ್ಲಿ ನೋಂದಣಿಯಾಗದ ಎಷ್ಟೋ ವಿಷಯಗಳು ನಡೆಯುತ್ತಿವೆ. ಹಿಂದೂ ಧರ್ಮವೇ ನೋಂದಣಿಯಾಗಿಲ್ಲ, ಹೀಗೆ ಹಲವು ವಿಷಯಗಳು ನೋಂದಣಿಯಿಲ್ಲದೆಯೇ ನಡೆದುಕೊಂಡು ಬರುತ್ತಿವೆ” ಎಂದರು.
ಸರ್ಕಾರದಿಂದ ಧನಸಹಾಯ ಅಥವಾ ಹಣವನ್ನು ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯ ಅಗತ್ಯವಿರುತ್ತದೆ ಎಂದು ಹೇಳಿದ ಅವರು, ಆರ್‌ಎಸ್‌ಎಸ್ ವಿಷಯಕ್ಕೆ ಬಂದರೆ, ಸಂಘಟನೆ ಅಸ್ತಿತ್ವದಲ್ಲಿದೆ ಎಂಬುದು ಸರ್ಕಾರಕ್ಕೆ ಚೆನ್ನಾಗಿಯೇ ತಿಳಿದಿದೆ ಎಂದು ಹೇಳಿದರು.
“ಬ್ರಿಟಿಷರ ಕಾಲದಲ್ಲೇ ಸಾರ್ವಜನಿಕರ ಇಚ್ಛಾಶಕ್ತಿಯಂತೆ ಸಂಘವು ಆರಂಭವಾಯಿತು. ಸರ್ಕಾರ ನಮ್ಮನ್ನು ಎರಡು ಬಾರಿ ನಿಷೇಧಿಸಿತ್ತು. ನಂತರ ಆ ನಿಷೇಧವನ್ನು ತೆರವುಗೊಳಿಸಲಾಯಿತು—ಒಮ್ಮೆ ನ್ಯಾಯಾಲಯದ ಆದೇಶದ ಮೂಲಕ ಮತ್ತು ಇನ್ನೊಮ್ಮೆ ಸತ್ಯಾಗ್ರಹದ ಮೂಲಕ. ಹಾಗಾಗಿ ಸರ್ಕಾರಕ್ಕೆ ನಮ್ಮ ಬಗ್ಗೆ ತಿಳಿದಿದೆ. ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು ಎಂದರೆ, ಆರ್‌ಎಸ್‌ಎಸ್ ಅಸ್ತಿತ್ವದಲ್ಲಿದೆ ಎಂಬುದು ಅವರಿಗೆ ತಿಳಿದಿತ್ತು ಎಂದೇ ಅರ್ಥ. ಆರ್‌ಎಸ್‌ಎಸ್‌ಗೆ ಮಾನ್ಯತೆ ಇದೆ. ಕಳೆದ 100 ವರ್ಷಗಳಲ್ಲಿ ಯಾರೂ ನಮಗೆ ‘ನೀವು ನೋಂದಣಿ ಮಾಡಿಸಲೇಬೇಕು’ ಎಂದು ಹೇಳಿಲ್ಲ. ನಮ್ಮ ಲಿಖಿತ ಸಂವಿಧಾನವು ಸರ್ಕಾರದ ಬಳಿ ಇದೆ. ಅದನ್ನು ನಾವು 1950ರ ದಶಕದಲ್ಲೇ ಸಲ್ಲಿಕೆ ಮಾಡಿದ್ದೇವೆ” ಎಂದು ಭಾಗವತ್ ತಿಳಿಸಿದರು.
ಪ್ರಿಯಾಂಕ್ ಖರ್ಗೆ ಪತ್ರದಲ್ಲೇನಿತ್ತು?:
ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ (100 ವರ್ಷ) ಸಂಭ್ರಮದಲ್ಲಿರುವ ಬೆನ್ನಲ್ಲೇ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಬಹಿರಂಗ ಪತ್ರವೊಂದನ್ನು ಹಂಚಿಕೊಂಡಿದ್ದರು. “60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಸಂಘಟನೆಯು ಪಾರದರ್ಶಕತೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಎತ್ತಿಹಿಡಿಯಬೇಕು” ಎಂದು ಅವರು ಒತ್ತಾಯಿಸಿದ್ದರು.
 ತನ್ನ ನೂರನೇ ವರ್ಷದಲ್ಲಿ, ಆರ್‌ಎಸ್‌ಎಸ್ ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ನೋಂದಣಿ ಹಾಗೂ ಹಣಕಾಸು ಹಾಗೂ ಇತರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಖರ್ಗೆ ಪತ್ರದಲ್ಲಿ ಆಗ್ರಹಿಸಿದ್ದರು.
“ಇಷ್ಟು ದೊಡ್ಡ ಪ್ರಮಾಣದ ವ್ಯಾಪ್ತಿ ಮತ್ತು ಪ್ರಭಾವವನ್ನು ಹೊಂದಿರುವ ಆರ್‌ಎಸ್‌ಎಸ್, ತನ್ನ ಕಾನೂನುಬದ್ಧ ಸ್ಥಾನಮಾನ, ನೋಂದಣಿ, ಪದಾಧಿಕಾರಿಗಳ ವಿವರ, ಧನಸಹಾಯ (ಫಂಡಿಂಗ್), ವೆಚ್ಚಗಳು, ತೆರಿಗೆ ಪಾವತಿ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ಪಡೆಯುವ ಅನುಮತಿಗಳ ಬಗ್ಗೆ ಸ್ಪಷ್ಟನೆಯನ್ನು ನೀಡಬೇಕು” ಎಂದು ಸಚಿವ ಖರ್ಗೆ ಪತ್ರದ ಮೂಲಕ ಒತ್ತಾಯಿಸಿದ್ದರು. ಇದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್‌ ಇದು ರಾಜಕೀಯ ಗಿಮಿಕ್ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement