ಮಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ 3ನೇ ದಿನ ಗುರುವಾರದ ಶೋಧ ಕಾರ್ಯದ ವೇಳೆ ಆರನೇ ಸ್ಥಳದಲ್ಲಿ ಅಗೆಯುವ ವೇಳೆ ಮೂಳೆ ರೀತಿಯ ಅವಶೇಷಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ದೂರುದಾರ ಗುರುತಿಸಿರುವ ನೇತ್ರಾವತಿ ಸ್ನಾನ ಘಟ್ಟದ ಸಮೀಪವಿರುವ ಆರನೇ ಸ್ಥಳದಲ್ಲಿ ಅಗೆಯುವ ವೇಳೆ ಕೆಲವು ಎಲುಬಿನ ಚೂರುಗಳು ಲಭಿಸಿದೆ ಎಂಬ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಆದರೆ ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಎಸ್ಐಟಿ ಅಧಿಕಾರಿಗಳು ಗುರುವಾರ ದೂರುದಾರ ಗುರುತಿಸಿರುವ 13 ಸ್ಥಳಗಳ ಪೈಕಿ ನೇತ್ರಾವತಿ ನದಿಯ ಬದಿಯಲ್ಲಿರುವ 6ನೇ ಜಾಗದಲ್ಲಿ ಅಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮೊದಲು ಎರಡು ದಿನಗಳಲ್ಲಿ ಸಾಕ್ಷಿ ದೂರುದಾರ ಗುರುತಿಸಿದ್ದ ಐದು ಜಾಗಗಳಲ್ಲಿ ಎಸ್ಐಟಿ ಅಗೆದ ವೇಳೆ ಯಾವುದೇ ಅವಶೇಷಗಳು ಸಿಕ್ಕಿರಲಿಲ್ಲ.
ಎಸ್ಐಟಿಯು ಧರ್ಮಸ್ಥಳದ ಕಾಡುಪ್ರದೇಶದಲ್ಲಿ ಗುರುತಿಸಲಾದ ಪಾಯಿಂಟ್ ನಂಬರ್ 6ರಲ್ಲಿ ಉತ್ಖನನ ಕಾರ್ಯವನ್ನು ಕೈಗೊಂಡಿತು. ಈ ವೇಳೆ ಮೂಳೆ ರೀತಿಯ ವಸ್ತುಗಳು ಪತ್ತೆಯಾಗಿವೆ. ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇವುಗಳನ್ನು ನಿಯಮ ಪ್ರಕಾರವಾಗಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುತ್ತದೆ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ