ಕಾರವಾರ: ಮನೆಯೊಂದಕ್ಕೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಹೊತ್ತಿ ಉರಿದು ಅಪಾರ ಹಾನಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದಗದ್ದಾದಲ್ಲಿ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಕಾರವಾರ ನಗರದ ನಂದನಗದ್ದಾ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಇರುವ ಶಾಂತಾರಾಮ ದೇಸಾಯಿ ಎಂಬುವರ ಹಂಚಿನ ಮನೆಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಹೊತ್ತಿ ಉರಿದಿದ್ದರಿಂದ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ವರದಿಗಳ ಪ್ರಕಾರ, ಮನೆಯವರು ದೀಪ ಹೆಚ್ಚಿ ಮನೆಗೆ ಬೀಗ ಹಾಕಿ ಮಾರುಕಟ್ಟೆಗೆ ತೆರಳಿದ್ದರು ಎಂದು ಹೇಳಲಾಗಿದೆ.
ಮನೆಯವರು ಹಿಂತಿರುಗಿ ಬರುವಷ್ಟರಲ್ಲಿ ಮನೆ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ಕಿಡಿ ಹತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ದುಬಾರಿ ವಸ್ತುಗಳು, ದಾಖಲೆಗಳು ಸೇರಿದಂತೆ ಎಲ್ಲವೂ ಸುಟ್ಟು ಹೋಗಿವೆ. ನೆರೆಹೊರೆಯವರು ಬೆಂಕಿಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬೆಂಕಿಯ ಪ್ರಮಾಣ ಹೆಚ್ಚಿದ್ದ ಕಾರಣ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ವರದಿಯಾಗಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ