ಹೊನ್ನಾವರ: ಕಟ್ಟಡ ಕಾಮಗಾರಿ ಸ್ಥಳದಿಂದ ಕಬ್ಬಿಣದ ಸೆಂಟ್ರಿಂಗ್ ಶೀಟ್ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರ ತಂಡವೊಂದನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸಿ ಆರೋಪಿಗಳಿಂದ ₹5 ಲಕ್ಷ ಮೌಲ್ಯದ ಕಳವು ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತವೀರ್ ಅಹಮ್ಮದ್, ಷಹಾದ್ ಉಲ್ಲಾ, ಮಹ್ಮದ್ ಮನ್ಸೂರ್ ಮತ್ತು ಕಲೀಮುಲ್ಲಾ ಅಲಿಯಾಸ್ ಕಲೀಂ ಬಂಧಿತ ಆರೋಪಿಗಳು.
ಕಳೆದ ತಿಂಗಳು, ಕಾಸರಕೋಡ ರೋಷನ್ ಮೊಹಲ್ಲಾದಲ್ಲಿನ ಮಸೀದಿ ಹತ್ತಿರ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟ್ಗಳ ಕಳ್ಳತನ ಮಾಡಲಾಗಿತ್ತು.ಜುಲೈ 15ರ ರಾತ್ರಿ 7 ಗಂಟೆಯಿಂದ ಜುಲೈ 16ರ ಬೆಳಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿತ್ತು. ಈ ಬಗ್ಗೆ ರಾಮಾ ನಾಯ್ಕ ಎಂಬವರು ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಬಂಧಿತರಿಂದ ₹2 ಲಕ್ಷ ಮೌಲ್ಯದ 180 ಕಬ್ಬಿಣದ ಸೆಂಟ್ರಿಂಗ್ ಶೀಟ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಸೇರಿ ಒಟ್ಟು ₹5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳ್ಳತನವನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ ಪಿಎಸ್ಐ ರಾಜಶೇಖರ ವಂದಲಿ ನೇತೃತ್ವದಲ್ಲಿ ಸಿಬ್ಬಂದಿ ಗಜಾನನ ನಾಯ್ಕ, ವಿಠ್ಠಲ ಗೌಡ, ಮನೋಜ ಡಿ, ರವಿ ನಾಯ್ಕ, ಚಂದ್ರಶೇಖರ ನಾಯ್ಕ, ಅನಿಲ ಲಮಾಣಿ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ