ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ; ರಾಹುಲ್ ಗಾಂಧಿ ಆರೋಪ

ನವದೆಹಲಿ: ಮತಗಳ್ಳತನದ ಆರೋಪದ ಮೇಲೆ ಚುನಾವಣಾ ಆಯೋಗದ (ಇಸಿ) ಮೇಲೆ ನಿರಂತರ ದಾಳಿ ನಡೆಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಲೋಕಸಭಾ ಚುನಾವಣೆಗಳನ್ನು ವಂಚಿಸಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದ್ದಾರೆ.
ಗುರವಾರ (ಆಗಸ್ಟ್‌ ೭) ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ನಕಲಿ ಜನರನ್ನು ಸೇರಿಸಲಾಗುತ್ತಿದೆ ಎಂದು ಕರ್ನಾಟಕದ ಮತದಾರರ ಪಟ್ಟಿಯನ್ನು ತೋರಿಸಿ ಆರೋಪಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ ಬೃಹತ್ ಕಳ್ಳತನ ನಡೆದಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ 6.5 ಲಕ್ಷ ಮತಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು, ಅಮಾನ್ಯ ವಿಳಾಸಗಳು ಎಂದು ಕಾಂಗ್ರೆಸ್ ನಡೆಸಿದ ಆಂತರಿಕ ಸಂಶೋಧನೆಯು ಕಂಡುಬಂದಿದೆ” ಎಂದು ಅವರು ಹೇಳಿದರು.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00, 250 ಮತದಾರರಲ್ಲಿ 11,965 ನಕಲಿ ಮತದಾರರು, 40,009 ಸುಳ್ಳು ಹಾಗೂ ಅಮಾನ್ಯ ವಿಳಾಸ, 10,452 ಮಂದಿ ಒಂದೇ ವಿಳಾಸದಲ್ಲಿ ಮತದಾನ ಮಾಡಿದ ಹಲವರು, 4132 ಮಂದಿ ಅಮಾನ್ಯ ಭಾವಚಿತ್ರ ಮೂಲಕ ಹಾಗೂ 33,692 ಮಂದಿ ಫಾರ್ಮ್‌ 6 ದುರ್ಬಳಕೆ ಮಾಡಿಕೊಂಡು ಮತದಾನ ಮಾಡಿದ್ದಾರೆ ಎಂದು ಆರೋಪಿಸಿದರು. ಸುಳ್ಳು ಹಾಗೂ ಅಮಾನ್ಯ ವಿಳಾಸ ನೀಡಿ ಮತದಾನ ಮಾಡಿದ 40,009 ಮಂದಿಯ ದಾಖಲೆಯ ಬಗ್ಗೆ ಹಾಗೂ 40, 50, ಮತದಾರರು ಒಂದೇ ಕೊಠಡಿಯಲ್ಲಿ ವಾಸವಿರುವ ಬಗ್ಗೆಯೂ ಪರಿಶೀಲನೆಗೊಳಪಡಿಸಿದ ದಾಖಲೆಗಳನ್ನು ಕೂಡ ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪ್ರದರ್ಶಿಸಿದರು.
ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ರೂಪದಲ್ಲಿ ಮತದಾರರ ಪಟ್ಟಿಯನ್ನು ನೀಡದಿರುವ ಬಗ್ಗೆಯೂ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆ ಮಾಡುವುದರಿಂದ ಕೇವಲ 30 ಸೆಕೆಂಡುಗಳಲ್ಲಿ ಆಯೋಗದ “ವಂಚನೆ” ಬಹಿರಂಗಗೊಳ್ಳುತ್ತದೆ ಎಂದು ಹೇಳಿದರು.

“ಇದೊಂದು ಸವಾಲಿನ ಕೆಲಸ. ನೀವು ಎರಡು ಬಾರಿ ಮತ ಚಲಾಯಿಸಿದ್ದೀರಾ ಅಥವಾ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆಯೇ ಎಂದು ಕಂಡುಹಿಡಿಯಲು ಬಯಸಿದರೆ, ನಾನು ನಿಮ್ಮ ಚಿತ್ರವನ್ನು ತೆಗೆದುಕೊಳ್ಳಬೇಕು. ನಂತರ ನಾನು ಅದನ್ನು ಪ್ರತಿಯೊಂದು ಕಾಗದದ ತುಣುಕಿನೊಂದಿಗೆ ಹೋಲಿಸಬೇಕು ಎಂದು ಅವರು ಹೇಳಿದರು.
“ಈ ಕಾರ್ಯವು ನಮಗೆ ಆರು ತಿಂಗಳುಗಳನ್ನು ತೆಗೆದುಕೊಂಡಿತು (ಮಹಾದೇವಪುರ). ಚುನಾವಣಾ ಆಯೋಗವು ನಮಗೆ ಎಲೆಕ್ಟ್ರಾನಿಕ್ ಡೇಟಾವನ್ನು ನೀಡಿದರೆ, ಅದು ನಮಗೆ 30 ಸೆಕೆಂಡುಗಳಲ್ಲಿ ಮಾಹಿತಿ ನೀಡುತ್ತದೆ. ನಮಗೆ ಈ ರೀತಿಯ ಡೇಟಾವನ್ನು ಏಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಚುನಾವಣಾ ಅಕ್ರಮಗಳು ನಡೆದಿರುವ ಸಲುವಾಗಿ ಆಗಸ್ಟ್‌ 8ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ತುರುಸಿನ ಸ್ಪರ್ಧೆಯನ್ನು ಕಂಡಿತು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೆಚ್ಚಿನ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರೂ ಅಂತಿಮ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿಯ ಪಿ.ಸಿ. ಮೋಹನ ಅವರು 32,707 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಮುಖ ಸುದ್ದಿ :-   ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement