ವೀಡಿಯೊ…| ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ಪೂಜಾ ಪಾತ್ರೆ ತೊಳೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಹೂವು ಕಟ್ಟಿದ ಸುಧಾಮೂರ್ತಿ

ಉಡುಪಿ: ಕರ್ನಾಟಕದ ಉಡುಪಿಗೆ ಭೇಟಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪೂಜಾ ಪಾತ್ರೆ ತೊಳೆಯುವ ಮೂಲಕ ಸರಳತೆ ಮೆರೆದಿದ್ದಾರೆ. ಅವರಿಗೆ ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಸಾಥ್ ನೀಡಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಹೊಸ್ತಿಲು ಪೂಜೆ, ದೇವರ ಪೂಜಾ ಸಾಮಗ್ರಿ ಸ್ವಚ್ಛ ಮಾಡಿದ್ದಾರೆ. ತಮ್ಮ ಮನೆಯಿಂದಲೇ ತಂದ ಹಿಡಿ ಅವಲಕ್ಕಿಯನ್ನು ಶ್ರೀಪಾದರ ಮೂಲಕ ಕಾಣಿಕೆ ಸಮೇತವಾಗಿ ಶ್ರೀಕೃಷ್ಣ ದೇವರಿಗೆ ಅರ್ಪಿಸಿದ್ದಾರೆ.
ನವಗೃಹ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ಮಹಾಪೂಜೆಯನ್ನು ಕಂಡು ಅನಂತರ ಮುಖ್ಯಪ್ರಾಣ ಹಾಗೂ ಮಧ್ವಾಚಾರ್ಯರ ಪೂಜೆಯಲ್ಲಿ ಭಾಗವಹಿಸಿದರು. ಶ್ರೀಪಾದರು ನಡೆಸುವ ಪ್ರದಕ್ಷಿಣೆ ನಮಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು.

ದೇವರ ಪೂಜಾಪಾತ್ರೆ ತೊಳೆದ ವಿತ್ತ ಸಚಿವೆ, ಹೂಕಟ್ಟಿದ ಸುಧಾಮೂರ್ತಿ
ಇದೇವೇಳೆ ಭೋಜನ ಶಾಲೆಯಲ್ಲಿ ದೇವರ ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವುದರಲ್ಲೂ ಪಾಲೋಳುವ ಮೂಲಕ ನಿರ್ಮಲಾ ಸೀತಾರಾಮನ್ ಗಮನ ಸೆಳೆದರು. ಗೋ ಶಾಲೆಯಲ್ಲಿ ಹಸುಗಳಿಗೆ ಹುಲ್ಲು ನೀಡಿದರು. ಅನಂತರ ಭೋಜನ ಶಾಲೆಯಲ್ಲಿ ಶ್ರಾವಣ ಶನಿವಾರದ ನಿಮಿತ್ತ ಸೌಟು ಹಿಡಿದು ಹಲ್ವಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಎಲ್ಲ ಚಟುವಟಿಕೆಗಳಲ್ಲಿ ಸುಧಾ ಮೂರ್ತಿಯವರು ಅವರೊಂದಿಗೆ ಇದ್ದರು.
ನಿರ್ಮಲಾ ಸೀತಾರಾಮನ್‌, ಸುಧಾ ಮೂರ್ತಿಯವರು ಆಷಾಢ ಮಾಸದ ಹುಣ್ಣಿಮೆಯಂದು ನಡೆಸುವ ಹೊಸ್ತಿಲು ಪೂಜೆಯನ್ನು ನಡೆಸಿದರು. ಹಾಗೆಯೇ ದೇವರ ಪಾತ್ರೆಗಳನ್ನು ಸುಧಾಮೂರ್ತಿ ಹಾಗೂ ಸಚಿವೆ ಇಬ್ಬರೂ ಸೇರಿ ಶುಚಿಗೊಳಿಸಿ ದೇವರ ಸೇವೆ ಮಾಡಿದರು.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಭಾರತ ಲಕ್ಷ್ಮಿ ಎಂಬ ಬಿರುದು ನೀಡಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಗೌರವಿಸಿದ್ದಾರೆ. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಬಿರುದು ಪ್ರದಾನ ಮಾಡಿದರು.
ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ಸಿದ್ಧಪಡಿಸುವುದರಲ್ಲಿಯೂ ಭಾಗವಹಿಸಿದರು. ಇಬ್ಬರೂ ಚಂದ್ರ ಶಾಲೆಯಲ್ಲಿ ಕುಳಿತು ದೇವರ ಸೇವೆಗೆ ಹೂವು ಕಟ್ಟುವ ಮೂಲಕ ಗಮನಸೆಳೆದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement