ತುಮಕೂರು: ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಮೂವರು ದೆಹಲಿಯಲ್ಲಿ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಧುಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಪಿತೂರಿ ವಿದ್ಯೆ ನನಗೂ ಗೊತ್ತಿದೆ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ, ಮುಂದೆ ಕಾಲ ಬಂದೇ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಸಲು ಯತ್ನಿಸಿದ್ದಾರೆ ಆದರೆ ಅದು ಆಗಿಲ್ಲ. ವಿಧಾನಸಭೆ ಅಧಿವೇಶನ ಮುಗಿದ ನಂತರ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸುತ್ತೇನೆ. ಇದೇ ಅವಧಿಯಲ್ಲಿ ಸಚಿವನಾಗುತ್ತೇನೆ ಎಂಬ ಭರವಸೆ ಇದೆ. ದೆಹಲಿಗೆ ಹೋಗಿ ಬಂದ ಮೇಲೆ ಸಿಹಿಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಮಧುಗಿರಿಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಬಡವರ ಪರ ಆಡಳಿತ ನೀಡಿದ ದೇವರಾಜ ಅರಸು ಮತ್ತು ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ಜಾರಿಗೆ ತಂದ ವೀರಪ್ಪ ಮೊಯ್ಲಿ ಅವರಂತಹ ನಾಯಕರನ್ನೇ ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಅವರ ಮುಂದೆ ನನ್ನ ಅಧಿಕಾರ ಹೋಗಿರುವುದು ದೊಡ್ಡದಲ್ಲ ಎಂದು ಹೇಳಿದರು.
ನನ್ನ ಸಚಿವ ಸ್ಥಾನ ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂಷಿಸುವುದು ಸರಿಯಲ್ಲ. ಅಧಿಕಾರ ಹೋಗಲು ಹಲವು ಕಾರಣಗಳಿವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ