ಯಲ್ಲಾಪುರ : ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ (KSRTC bus) ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿ, 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶುಕ್ರವಾರ (ಆ.15) ಮಧ್ಯರಾತ್ರಿ ಈ ಅಪಘಾತ ನಡೆದಿದೆ ಎನ್ನಲಾಗಿದ್ದು, ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಬಸ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ. ಮೃತ ಮೂವರು ಬಾಗಲಕೋಟೆ ಮೂಲದವರು ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನೀಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಮತ್ತು ಇನ್ನೋರ್ವ ಸುಮಾರು 45 ವರ್ಷದ ಪುರುಷ ವ್ಯಕ್ತಿ (ಹೆಸರು ತಿಳುದಬಂದಿಲ್ಲ) ಮೃತಪಟ್ಟಿದ್ದಾರೆ.
7 ಜನ ಗಾಯಾಳುಗಳಲ್ಲಿ ಹೆಚ್ಚಿನವರು ಬಾಗಲಕೋಟೆ ಜಿಲ್ಲೆಯ ಮೂಲದವರು ಎನ್ನಲಾಗಿದೆ. ಬಸ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ. ಬಾಗಲಕೋಟೆಯಿಂದ ಮಂಗಳೂರು ಕಡೆಗೆ ಬಸ್ ತೆರಳುತ್ತಿದ್ದ ಬಸ್ ಯಲ್ಲಾಪುರ ಅಂಕೋಲಾ ರಸ್ತೆಯಲ್ಲಿ ಓವರ್ಟೇಕ್ ಮಾಡುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಮೃತರು ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು ಎನ್ನಲಾಗಿದೆ.ಚಾಲಕ ಇಂಡಿಕೇಟರ್ ಹಾಕದೆ ಕತ್ತಲೆಯಲ್ಲಿ ಲಾರಿ ನಿಲ್ಲಿಸಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ನ ಒಂದು ಬಂದಿ ಸಂಪೂರ್ಣ ನಜ್ಜು ಗುಜ್ಜಾಗಿದೆ.
ಯಲ್ಲಾಪುರ ಸಿಪಿಐ ರಮೇಶ ಹಾನಾಪುರ, ಪಿಎಸ್ ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತರ ದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ