ನವದೆಹಲಿ: ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ ‘ಎಜುಕೇಟ್ ಗರ್ಲ್ಸ್’ ಎಂದು ವ್ಯಾಪಕವಾಗಿ ಕರೆಯಲ್ಪಡುವ ಭಾರತದ ಲಾಭರಹಿತ ಸಂಸ್ಥೆಯಾದ ಫೌಂಡೇಶನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದರೊಂದಿಗೆ ಪ್ರತಿಷ್ಠಿತ ಗೌರವ ಪಡೆದ ಭಾರತದ ಮೊದಲ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. 67 ನೇ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7 ರಂದು ಮನಿಲಾದ ಮೆಟ್ರೋಪಾಲಿಟನ್ ಥಿಯೇಟರ್‌ನಲ್ಲಿ ನಡೆಯಲಿದೆ.
ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ ‘ಎಜುಕೇಟ್ ಗರ್ಲ್ಸ್’ (Educate Girls) ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸಲು ನಿಸ್ವಾರ್ಥವಾಗಿ ಶ್ರಮಿಸುತ್ತಿದೆ.
‘ಎಜುಕೇಟ್ ಗರ್ಲ್ಸ್’ ಎನ್‌ಜಿಒ (NGO) 11 ಲಕ್ಷಕ್ಕಿಂತಲೂ ಹೆಚ್ಚು ಹುಡುಗಿಯರನ್ನು ಬೆಂಬಲಿಸಿದೆ ಮತ್ತು ಭಾರತದಾದ್ಯಂತ 1.55 ಕೋಟಿಗಿಂತಲೂ ಹೆಚ್ಚು ಜನರ ಮೇಲೆ ಪ್ರಭಾವ ಬೀರಿದೆ.
ಇದು ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮಾಡುತ್ತದೆ. ಶಿಕ್ಷಣವನ್ನು ಮುಂದುವರಿಸಲು ಅವರಿಗೆ ಬೆಂಬಲ ನೀಡುತ್ತದೆ.ದೂರದ ಹಳ್ಳಿಗಳಲ್ಲಿ ಶಾಲೆಯಿಂದ ಹೊರಗುಳಿದ ಹುಡುಗಿಯರನ್ನು ಸಬಲೀಕರಣಗೊಳಿಸಲು ಸಫೀನಾ ಹುಸೇನ್ ಅವರು ಈ ಎನ್‌ಜಿಒ (NGO)ಅನ್ನು ಸ್ಥಾಪಿಸಿದರು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪದವೀಧರೆ 54 ವರ್ಷದ ಹುಸೇನ್, 2007 ರಲ್ಲಿ ರಾಜಸ್ಥಾನದಲ್ಲಿ ‘ಎಜುಕೇಟ್ ಗರ್ಲ್ಸ್’ ಅನ್ನು ಸ್ಥಾಪಿಸಿ ದೂರದ ಹಳ್ಳಿಗಳಲ್ಲಿ ಶಾಲೆಯಿಂದ ಹೊರಗುಳಿದ ಹುಡುಗಿಯರನ್ನು ಸಬಲೀಕರಣಗೊಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ