ನವದೆಹಲಿ: ಭಾರತದ ಖರೀದಿದಾರರಿಗೆ ರಷ್ಯಾ ತೈಲ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಿದೆ. ರಷ್ಯಾ ಮತ್ತಷ್ಟು ರಿಯಾಯಿತಿ ಘೋಷಿಸಿದ್ದು, ಪ್ರತಿ ಬ್ಯಾರೆಲ್‌ಗೆ $3-4 ರಷ್ಟು ಕಡಿಮೆ ಮಾಡುತ್ತಿದೆ.
ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಉದ್ವಿಗ್ನತೆಯ ನಡುವೆ ಟ್ರಂಪ್ ಆಡಳಿತವು ಭಾರತವು ರಷ್ಯಾದ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ಆಮದುಗಳ ಮೇಲೆ 50% ಸುಂಕವನ್ನು ವಿಧಿಸಿದ್ದರ ಮಧ್ಯೆ ರಷ್ಯಾ ಈ ಘೋಷಣೆ ಮಾಡಿದೆ. ರಷ್ಯಾದ ಜೊತೆ ತೈಲ ಖರೀದಿ ಒಪ್ಪಂದಗಳ ಮೂಲಕ ಉಕ್ರೇನ್ ಜೊತೆ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್‌ನಲ್ಲಿ ಖರೀದಿಯಾಗುವ ಪೆಟ್ರೋಲ್‌ಗಳಿಗೆ ರಷ್ಯಾದ ಯುರಲ್ಸ್ ಕಚ್ಚಾ ತೈಲವನ್ನು ಈಗ ಬ್ಯಾರೆಲ್‌ಗೆ $3 ರಿಂದ $4 ರವರೆಗೆ ಕಡಿಮೆ ದರದಲ್ಲಿ ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.
ಕಳೆದ ವಾರವಷ್ಟೇ, ರಿಯಾಯಿತಿಯು ಜುಲೈನಲ್ಲಿ $1 ಕ್ಕೆ ಹೋಲಿಸಿದರೆ ಸುಮಾರು $2.50 ಆಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಸಂಸ್ಕರಣಾಗಾರರು ಇತ್ತೀಚೆಗೆ ಖರೀದಿಸಿದ ಅಮೆರಿಕ ಕಚ್ಚಾ ತೈಲವು ಬ್ರೆಂಟ್‌ಗೆ $3 ಪ್ರೀಮಿಯಂನಲ್ಲಿ ಬಂದಿತು, ಇದಕ್ಕಿಂತ ರಷ್ಯಾದ ತೈಲ ಅಗ್ಗದ ಆಯ್ಕೆಯಾಗಿತ್ತು.
ಭಾರತವು ರಷ್ಯಾದ ತೈಲದ ಅಗ್ರ ಖರೀದಿದಾರ
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರನಾದ ಭಾರತವು 2022 ರಿಂದ ರಷ್ಯಾದ ಕಚ್ಚಾ ತೈಲ ಖರೀದಿಗಳನ್ನು ತೀವ್ರವಾಗಿ ಹೆಚ್ಚಿಸಿದೆ, ಇದು ಒಟ್ಟು ಆಮದಿನ ಸುಮಾರು 40% ಕ್ಕೆ ತಲುಪಿದೆ. ಪ್ರಸ್ತುತ, 2024–25ರಲ್ಲಿ ಭಾರತದ ದಿನಕ್ಕೆ 5.4 ಮಿಲಿಯನ್ ಬ್ಯಾರೆಲ್‌ಗಳ ಆಮದುಗಳಲ್ಲಿ ರಷ್ಯಾದ ತೈಲ 36% ರಷ್ಟಿದೆ, ಇದು ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕದ ಖರೀದಿಯನ್ನು ಮೀರಿಸಿದೆ.
ಭಾರತದ ಸರಕುಗಳ ಮೇಲೆ ಅಮೆರಿಕ 50% ಸುಂಕ
ಭಾರತದ ಮೇಲೆ ಅಮೆರಿಕ ಆರಂಭದಲ್ಲಿ ಶೇ. 25 ರಷ್ಟು ಸುಂಕ ಘೋಷಿಸಿತು. ಆದರೆ ನಂತರ ರಷ್ಯಾದಿಂದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಭಾರತಕ್ಕೆ ದಂಡ ಎಂದು ಶೇ. 25 ರಷ್ಟು ಸುಂಕ ಎಂದು ಹೆಚ್ಚುವರಿ ಸುಂಕ ವಿಧಿಸುವ ಮೂಲಕ ಶೇ. 50ಕ್ಕೆ ಹೆಚ್ಚಿಸಿತು.
ಆದಾಗ್ಯೂ, ಭಾರತವು ಇದಕ್ಕೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತು ಮತ್ತು ಅಮೆರಿಕದ ಸುಂಕಗಳನ್ನು ‘ಅಸಮರ್ಥನೀಯ’ ಎಂದು ಕರೆದಿತು, ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕ ಸೇರಿದಂತೆ ಹಲವಾರು ದೇಶಗಳು ರಷ್ಯಾದಿಂದ ಸರಕುಗಳನ್ನುಆಮದು ಮಾಡಿಕೊಳ್ಳುತ್ತಿವೆ ಮತ್ತು ಭಾರತವನ್ನು ಗುರಿಯಾಗಿಸಿಕೊಳ್ಳುವುದು ‘ಡಬಲ್ ಸ್ಟ್ಯಾಂಡರ್ಡ್’ ಎಂದು ಪ್ರತಿಪಾದಿಸಿತು.
ಚೀನಾದಲ್ಲಿ ಮೋದಿ-ಪುತಿನ್ ಸಭೆ
ಪ್ರಧಾನಿ ನರೇಂದ್ರ ಮೋದಿ ಚೀನಾದಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿಯಾದರು. ಸೋಮವಾರ ಬೆಳಿಗ್ಗೆ ಶೃಂಗಸಭೆಯ ನಂತರ, ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ತಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಟ್ಟಿಗೆ ಪ್ರಯಾಣಿಸಿದರು. ಅದರ ನಂತರ ರಷ್ಯಾದಿಂದ ಮತ್ತಷು ರಿಯಾಯಿತು ಘೋಷಣೆಗಳು ಬಂದಿವೆ.


ನಿಮ್ಮ ಕಾಮೆಂಟ್ ಬರೆಯಿರಿ