
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಆರೋಪಿತ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿದ್ದ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಕಾರಣನಾಗಿದ್ದ ಸಾಕ್ಷಿ ದೂರುದಾರನಾದ ಸಿ ಎನ್ ಚಿನ್ನಯ್ಯನ ಪೊಲೀಸ್ ಕಸ್ಟಡಿಯನ್ನು ಬೆಳ್ತಂಗಡಿ ನ್ಯಾಯಾಲಯವು ಮತ್ತೆ ಮೂರು ದಿನ ವಿಸ್ತರಿಸಿದೆ.
ಈ ಹಿಂದೆ ನ್ಯಾಯಾಲಯವು ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ವಿಶೇಷ ತನಿಖಾ ದಳದ ಕಸ್ಟಡಿಗೆ ನೀಡಿತ್ತು. ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ ಅನೇಕ ಶವಗಳನ್ನು ಹೂಳಿರುವುದಾಗಿ ಹೇಳಿಕೊಂಡಿದ್ದ ಬಂಧಿತ ಚಿನ್ನಯ್ಯನನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಟಿ ಎಚ್ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಯಿತು.
ಬುಧವಾರ (ಸೆಪ್ಟೆಂಬರ್ ೩) ಎಸ್‌ಐಟಿ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಮತ್ತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಇನ್ನೂ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿ ವಿಸ್ತರಣೆಯ ಅಗತ್ಯವಿರುವುದನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾದರು. ನ್ಯಾಯಾಧೀಶರು ಚಿನ್ನಯ್ಯನನ್ನು ಮತ್ತೆ ಮೂರು ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ