ಮುಂಬೈ : ಆಪಲ್ ಕಂಪನಿಯು ತನ್ನ ಹೊಸ ಐಫೋನ್ 17 (iPhone 17) ಶ್ರೇಣಿಯಲ್ಲಿನ ಉನ್ನತ ಮಾಡೆಲ್‌ಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್, ಜೊತೆಗೆ ಐಫೋನ್ 17 ಮತ್ತು ಹೊಸ ಐಫೋನ್ ಏರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದು, ಶುಕ್ರವಾರ ಬೆಳಿಗ್ಗೆ ಮುಂಬೈ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆಂಪಲ್ ಅಂಗಡಿಯಲ್ಲಿ ಖರೀದಿದಾರರ ನಡುವೆ ಪರಸ್ಪರ ಜಗಳ ಉಂಟಾಗಿದೆ. ಈ ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗಿದೆ.
ಐಫೋನ್ 17 ಮೊಬೈಲ್ ಖರೀದಿಸುವ ಮೊದಲಿಗರಲ್ಲಿ ಒಬ್ಬರಾಗಲು ಆಪಲ್ ಶಾಪ್ ಹೊರಗೆ ಡಜನ್ಗಟ್ಟಲೆ ಜನರು ಒತ್ತಟ್ಟಿಗೆ ಜಮಾಯಿಸಿದ್ದರು. ವೀಡಿಯೊದಲ್ಲಿ, ಆಪಲ್ ಶೋರೂಂ ಹೊರಗೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು, ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು.
ಕೆಂಪು ಶರ್ಟ್ ಧರಿಸಿದ ಒಬ್ಬ ವ್ಯಕ್ತಿಯನ್ನು ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿಹೊರಗೆ ಎಳೆದೊಯ್ಯುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಬಿಳಿ ಶರ್ಟ್ ಧರಿಸಿದ ಮತ್ತೊಬ್ಬ ಖರೀದಿದಾರ ಮಧ್ಯಪ್ರವೇಶಿಸಿ ಗಾರ್ಡ್ ಬಳಿ ಮಾತನಾಡುವುದು ಕಾಣುತ್ತದೆ. ನಂತರ ಕಪ್ಪು-ಬಿಳಿ ಶರ್ಟ್ ಧರಿಸಿದ ಮತ್ತೊಬ್ಬ ವ್ಯಕ್ತಿಯನ್ನು ಜನಸಂದಣಿಯಿಂದ ದೂರ ತಳ್ಳಲಾಗುತ್ತದೆ. ಸಮವಸ್ತ್ರದಲ್ಲಿರುವ ಸಶಸ್ತ್ರ ಸಿಬ್ಬಂದಿ ಆತನನ್ನು ಜನಸಂದಣಿಯಿಂದ ಎಳೆದುಕೊಂಡು ಹೋಗುತ್ತಾರೆ. ಕೆಲವರು ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ಉತ್ಸಾಹಿ ಖರೀದಿದಾರರು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಹೊಸ ಸಾಧನಗಳನ್ನು ಖರೀದಿಸಲು ನಿಂತಿದ್ದರು. ಆದಾಗ್ಯೂ, ಜನಸಂದಣಿ ಹಾಗೂ ಸರತಿ ಸಾಲನ್ನು ನಿಯಂತ್ರಿಸಲು ಸರಿಯಾದ ವ್ಯವಸ್ಥೆ ಇಲ್ಲದ್ದು ಗೊಂದಲಕ್ಕೆ ಕಾರಣವಾಯಿತು.
ಮುಂಬೈನಲ್ಲಿ ನಡೆದ ಈ ಘಟನೆಗೆ ಭದ್ರತೆ ಕೊರತೆ ಕಾರಣ ಎಂದು ಹಲವು ಖರೀದಿದಾರರು ತಿಳಿಸಿದ್ದಾರೆ.
ಅಹಮದಾಬಾದಿನಿಂದ ಬಂದ ಖರೀದಿದಾರ ಮೋಹನ ಯಾದವ್ ಎಂಬವರು, ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೆ. ಅನೇಕ ಜನರು ಸರತಿ ಸಾಲುಗಳನ್ನು ಮುರಿದು ಮುನ್ನುಗ್ಗಲು ಪ್ರಯತ್ನಿಸಿದರು. ಇದು ಪ್ರವೇಶದ್ವಾರದಲ್ಲಿ ನೂಕುನುಗ್ಗಲಿಗೆ ಕಾರಣವಾಯಿತು. ನಾನು ಬೆಳಗ್ಗೆಯಿಂದ ಕಾಯುತ್ತಿದ್ದೇನೆ. ಸರತಿ ಸಾಲಿನಲ್ಲಿ ನಿಂತಿದ್ದೇನೆ. ಆದರೆ, ಜನರು ಸಾಲುಗಳನ್ನು ತಪ್ಪಿಸುತ್ತಿದ್ದರೂ ಭದ್ರತಾ ಅಧಿಕಾರಿಗಳ ಜವಾಬ್ದಾರಿಯ ಕೊರತೆಯಿಂದಾಗಿ ಸರದಿಯಲ್ಲಿ ನಿಂತವರಿಗೆ ಸಾಧನ ಖರೀದಿಸಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಿದರು.
ದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿರುವ ಆಪಲ್ ಔಟ್‌ಲೆಟ್‌ನ ಹೊರಗೂ ಇದೇ ರೀತಿಯ ಜನದಟ್ಟಣೆ ಕಂಡುಬಂದಿತು. ಅಲ್ಲಿ ಖರೀದಿದಾರರು ಹೊಸ ಐಫೋನ್‌ಗಳನ್ನು ಪಡೆಯಲು ರಾತ್ರಿಯಿಡೀ ಕಾಯುತ್ತಿದ್ದರು.
ಆಪಲ್‌ನ ಇತ್ತೀಚಿಗೆ ಬಿಡುಗಡೆ ಮಾಡಿದ ಸಾಲಿನಲ್ಲಿ ಐಫೋನ್ 17, ಐಫೋನ್ 17 ಪ್ರೊ ಮ್ಯಾಕ್ಸ್, ಏರ್‌ಪಾಡ್ಸ್ 3, ವಾಚ್ ಸರಣಿ 11, ವಾಚ್ SE3, ಮತ್ತು ವಾಚ್ ಅಲ್ಟ್ರಾ 3 ಸೇರಿವೆ. ಸೆಪ್ಟೆಂಬರ್ 9 ರಂದು ಜಾಗತಿಕವಾಗಿ ಅನಾವರಣಗೊಂಡ ಈ ಸಾಧನಗಳು ಭಾರತದಾದ್ಯಂತ ಭಾರಿ ಬೇಡಿಕೆ ಹೆಚ್ಚಿಸಿವೆ, ಪ್ರಮುಖ ನಗರಗಳಲ್ಲಿನ ಪ್ರಮುಖ ಅಂಗಡಿಗಳ ಮುಂದೆ ದೀರ್ಘ ಸರತಿ ಸಾಲುಗಳು ಕಾಣುತ್ತಿವೆ. ಇದರ ಬೆಲೆಗಳು 82,900 ರೂ.ಗಳಿಂದ 2.3 ಲಕ್ಷ ರೂ.ಗಳವರೆಗೆ ಇವೆ.


ನಿಮ್ಮ ಕಾಮೆಂಟ್ ಬರೆಯಿರಿ