ಲಡಾಖ್ಗೆ ರಾಜ್ಯಸ್ಥಾನ ಮಾನ ಕೋರಿ ಲೇಹ್ ಅಪೆಕ್ಸ್ ಬಾಡಿ (LAB) ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಪ್ರತಿಭಟನಾಕಾರರು ನಗರದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದರು. ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ನಡೆಸಿದ ಪ್ರತಿಭಟನೆ ಘರ್ಷಣೆಗೆ ತಿರುಗಿತು.
ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ತೀವ್ರ ಘರ್ಷಣೆಯಲ್ಲಿ ಕನಿಷ್ಠ ನಾಲ್ಕು ಜನರು ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿವರಗಳ ಪ್ರಕಾರ, ಸೆಪ್ಟೆಂಬರ್ 10 ರಿಂದ 35 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಸ್ಥಿತಿ ಮಂಗಳವಾರ ಸಂಜೆ ಹದಗೆಟ್ಟ ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕ ಲೇಹ್ ಅಪೆಕ್ಸ್ ಬಾಡಿ (LAB)ಯುವ ವಿಭಾಗವು ಪ್ರತಿಭಟನೆ ಮತ್ತು ಬಂದ್ಗೆ ಕರೆ ನೀಡಿತ್ತು.
ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಕೂಡ ಈ ಪ್ರದೇಶದಲ್ಲಿ ನಡೆಯುತ್ತಿರುವ ಆಂದೋಲನದ ಭಾಗವಾಗಿದ್ದರು. ಆದಾಗ್ಯೂ, ಪ್ರತಿಭಟನೆಗಳು ಹಿಂಸೆಗೆ ತಿರುಗಿದ ನಂತರ ಅವರು ತಮ್ಮ 15 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು.
ಸೋಮವಾರ, ಲೇಹ್ ಅಪೆಕ್ಸ್ ಬಾಡಿ (LAB) ತನ್ನ ನಾಯಕರು ರಾಜ್ಯ ಸ್ಥಾನಮಾನ ಮತ್ತು ಲಡಾಖ್ ಅನ್ನು ಆರನೇ ಪಟ್ಟಿಯಡಿಯಲ್ಲಿ ಸೇರಿಸುವ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದಿಲ್ಲ ಎಂದು ಘೋಷಿಸಿತ್ತು.
ನಗರದ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದ್ದು, ಆವರಣದಿಂದ ದಟ್ಟ ಹೊಗೆ ಮೇಲೇರುತ್ತಿರುವುದು ಕಂಡುಬಂದಿದೆ.
ನಗರದಲ್ಲಿರುವ ಬಿಜೆಪಿ ಕಚೇರಿಯನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ನಡೆಸುತ್ತಿದ್ದ ದಾಳಿಯಲ್ಲಿ ಪೊಲೀಸ್ ವ್ಯಾನ್ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಕಲ್ಲು ತೂರಾಟ ಸಹ ನಡೆಯಿತು.
ಬೃಹತ್ ಪ್ರತಿಭಟನೆ ಮತ್ತು ಬಂದ್ ನಡುವೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎನ್ನಲಾಗಿದ್ದು, ನಂತರ ಪೊಲೀಸರು ಲಾಠಿ ಚಾರ್ಜ್ ನಡೆಸಿದರು ಮತ್ತು ಅಶ್ರುವಾಯು ಶೆಲ್ಗಳನ್ನು ಹಾರಿಸಲಾಯಿತು.
X ನಲ್ಲಿ ವೀಡಿಯೊ ಸಂದೇಶದಲ್ಲಿ, ವಾಗ್ನ್ಚುಕ್ ಶಾಂತಿಗಾಗಿ ಮನವಿ ಮಾಡಿದರು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಯುವಕರನ್ನು ಒತ್ತಾಯಿಸಿದರು.
ಲಡಾಖ್ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು ಮತ್ತು ಆಗಸ್ಟ್ 5, 2019 ರಂದು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶವಾಯಿತು. ಅಂದರೆ ನೇರವಾಗಿ ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟಿತು. ಲಡಾಖ್, ಈಗ ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದೆ.
ಲಡಾಖ್ನಲ್ಲಿ ಸೆಕ್ಷನ್ 163
ಏತನ್ಮಧ್ಯೆ, ರಾಜ್ಯತ್ವದ ಮೇಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಲಡಾಖ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 163 ಅನ್ನು ವಿಧಿಸಿದ್ದಾರೆ. ಐದು ಜನರಿಗಿಂತ ಹೆಚ್ಚು ಜನರು ಸೇರುವುದನ್ನು ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಿಸಲಾಗಿದೆ.
ಇದಲ್ಲದೆ, ಪೂರ್ವಾನುಮತಿ ಇಲ್ಲದೆ ಯಾವುದೇ ರ್ಯಾಲಿಗಳು ಅಥವಾ ಮೆರವಣಿಗೆಗಳನ್ನು ನಡೆಸಲು ಅನುಮತಿ ಇಲ್ಲ. ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುವ ಯಾವುದೇ ಹೇಳಿಕೆಗಳನ್ನು ಸಹ ನಿಷೇಧಿಸಲಾಗಿದೆ.
ಸಾರ್ವಜನಿಕ ತಾಳ್ಮೆ ಕ್ಷೀಣಿಸುತ್ತಿದೆ ಎಂದು ಎಚ್ಚರಿಸಿ, ಲೇಹ್ ಅಪೆಕ್ಸ್ ಬಾಡಿ ಕೇಂದ್ರ ಸರ್ಕಾರವು ತಕ್ಷಣ ಸಭೆ ನಡೆಸಬೇಕೆಂದು ಒತ್ತಾಯಿಸಿದ ಎರಡು ದಿನಗಳ ನಂತರ ಇದು ಬಂದಿದೆ. ಮುಂದಿನ ಸುತ್ತಿನ ಚರ್ಚೆಗಾಗಿ ಅಕ್ಟೋಬರ್ 6 ರಂದು ಲಡಾಖ್ ನಿಯೋಗದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.
ಬಿಜೆಪಿಯು ಲಡಾಖ್ ಅನ್ನು ಸಂವಿಧಾನದ ಆರನೇ ಶೆಡ್ಯೂಲ್ಡ್ ಅಡಿಯಲ್ಲಿ ಸೇರಿಸುವ ಭರವಸೆಯನ್ನು ನೀಡಿದೆ ಎಂದು ಸೋನಮ್ ವಾಂಗ್ಚುಕ್ ಹೇಳಿದರು ಮತ್ತು ಮುಂಬರುವ ಹಿಲ್ ಕೌನ್ಸಿಲ್ ಚುನಾವಣೆಯ ಮೊದಲು ಈ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಿ ಹೇಳಿದರು.
“ಅವರು ತಮ್ಮ ಭರವಸೆಯನ್ನು ಪೂರೈಸಿದರೆ, ಲಡಾಖ್ ಅವರಿಗೆ ಮತ ಚಲಾಯಿಸುತ್ತದೆ ಮತ್ತು ಅವರನ್ನು ವಿಜಯಶಾಲಿಯನ್ನಾಗಿ ಮಾಡುತ್ತದೆ. ಅವರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಆದ್ದರಿಂದ ಅವರು ಅರ್ಥಪೂರ್ಣ ಮಾತುಕತೆಗಳನ್ನು ನಡೆಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ವಾಂಗ್ಚುಕ್ ಹೇಳಿದರು. ಮಾತುಕತೆ ವಿಳಂಬದಿಂದ ಜನರು ಅಸಹನೆ ಹೊಂದಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
“ಎಲ್ಲಾ ಸಮಸ್ಯೆಗಳು ಶಾಂತಿಯುತವಾಗಿ ಬಗೆಹರಿಯುತ್ತವೆ ಎಂದು ನಾವು ಭಾವಿಸುತ್ತೇವೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿದೆ, ಆದರೆ ಜನರು ಹತಾಶರಾಗಲು ಪ್ರಾರಂಭಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯಿಂದ ನಮಗೆ ಏನೂ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಭಾರತಕ್ಕೆ ಮುಜುಗರ ಉಂಟುಮಾಡುವ ಏನೂ ಸಂಭವಿಸಬಾರದು ಎಂದು ನಾವು ಬಯಸುತ್ತೇವೆ. ಶಾಂತಿ ನೆಲೆಸಿದರೆ ಉತ್ತಮ” ಎಂದು ವಾಂಗ್ಚುಕ್ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ