ಬೆಂಗಳೂರು : ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – 2025ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಆದರೆ, ಸಮೀಕ್ಷೆಯಲ್ಲಿ ಜನರು ಭಾಗವಹಿಸುವುದು ಕಡ್ಡಾಯವಲ್ಲ ಎಂದು ಹೇಳಿದೆ.
ಅಲ್ಲದೆ, ಇಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನನ್ನು ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ ಎಂದು ಬಾರ್ & ಬೆಂಚ್ ವರದಿ ಹೇಳಿದೆ.
ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್ಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ (ಸೆ.25)ವಿಚಾರಣೆ ನಡೆಸಿತು.
ವರದಿ ಪ್ರಕಾರ, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಸಮೀಕ್ಷೆಯ ಪ್ರಕ್ರಿಯೆಯನ್ನು ತಡೆಯುವುದು ಸೂಕ್ತ ಎನಿಸುವುದಿಲ್ಲ. ಆದರೆ, ಆಯೋಗವು ಸಂಗ್ರಹಿಸುವ ದತ್ತಾಂಶವನ್ನು ಯಾರಿಗೂ ಬಹಿರಂಗಪಡಿಸುವಂತಿಲ್ಲ. ಅದನ್ನು ಸಂರಕ್ಷಿಸಿ, ಗೌಪ್ಯವಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಾಪಾಡಬೇಕು. ಸಮೀಕ್ಷೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಅಲ್ಲಿ ಯಾವುದೇ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ ಎಂಬುದರ ಸಂಬಂಧ ಆಯೋಗವು ಹೊರಡಿಸುವ ಅಧಿಸೂಚನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ದತ್ತಾಂಶ ಸಂಗ್ರಹಿಸಲು ಮನೆಮನೆಗೆ ತೆರಳುವ ಮೇಲ್ವಿಚಾರಕರು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನು ಜನರಿಗೆ ತಿಳಿಸಬೇಕು. ಒಂದೊಮ್ಮೆ ಸಮೀಕ್ಷೆಯಲ್ಲಿ ಜನರು ಭಾಗವಹಿಸಲು ನಿರಾಕರಿಸಿದರೆ, ಮೇಲ್ವಿಚಾರಕರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಜನರನ್ನು ಪುಸಲಾಯಿಸುವಂತಿಲ್ಲ” ಎಂದು ನ್ಯಾಯಾಲಯ ನಿರ್ದೇಶಿಸಿದೆ.
“ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶವು ಆಯೋಗವಲ್ಲದೇ ಬೇರಾರಿಗೂ ಲಭ್ಯವಾಗಕೂಡದು. ದತ್ತಾಂಶ ಸಂಗ್ರಹ ಮತ್ತು ಅದರ ಗೌಪ್ಯತೆಗೆ ಸಂಬಂಧಿಸಿದಂತೆ ತಾನು ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗವು ಅಫಿಡವಿಟ್ ಸಲ್ಲಿಸಬೇಕು” ಎಂದು ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ಗೆ ಮುಂದೂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ