ಯಾದಗಿರಿ: ಸಂಶಯದ ಹುಳ ತಲೆಹೊಕ್ಕು ತಂದೆಯೊಬ್ಬ ತನ್ನಿಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪತ್ನಿಯ ಶೀಲದ ಬಗ್ಗೆ ಶಂಕೆ ಉಂಟಾದ ಕಾರಣ ಈ ಘೋರ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈತನ ಸಂಶಯ ಪಿಶಾಚಿಗೆ ಏನೂ ಅರಿಯದ ಪುಟ್ಟ ಮಕ್ಕಳು ಬಲಿಯಾಗಿದ್ದಾರೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಶರಣಪ್ಪ (30) ಎಂಬಾತ ಪತ್ನಿಯ ಶೀಲ ಶಂಕಿಸಿ ಮಕ್ಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ಈತ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಜಗಳದಿಂದ ಮನನೊಂದ ಪತ್ನಿ ಮಕ್ಕಳ ಸಮೇತ ತವರು ಮನೆಗೆ ಹೋಗಿದ್ದಳು. ರಾಜೀ ಸಂಧಾನದ ನಂತರ ಕೆಲವು ದಿನಗಳ ಹಿಂದಷ್ಟೇ ಮಕ್ಕಳನ್ನು ತನ್ನ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ. ಮಕ್ಕಳನ್ನು ರಾತ್ರಿ ಮಲಗಿದ ವೇಳೆ ಶರಣಪ್ಪ ಇವರನ್ನು ಕೊಚ್ಚಿ ಕೊಂದಿದ್ದಾನೆ. ಮಗಳು ಸಾನ್ವಿ (5 ವರ್ಷ) ಮತ್ತು ಮಗ ಭರತ 3 (ವರ್ಷ) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಮಾಡಿ ಪರಾರಿಯಾದ ಆರೋಪಿ ಶರಣಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ