ಶಿಲ್ಪಾ ಶೆಟ್ಟಿ, ರಾಜ ಕುಂದ್ರಾ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಹೈಕೋರ್ಟ್

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ ಕುಂದ್ರಾ ವಿರುದ್ಧ ಗಂಭೀರ ಆರ್ಥಿಕ ಅಪರಾಧ ಪ್ರಕರಣಗಳು ಬಾಕಿ ಇವೆ ಎಂಬುದನ್ನು ಉಲ್ಲೇಖಿಸಿ, ಬಾಂಬೆ ಹೈಕೋರ್ಟ್ ಅವರು ಕೋರಿದ್ದ ಥೈಲ್ಯಾಂಡಿನ ಫುಕೆಟ್‌ಗೆ ಮೂರು ದಿನಗಳ ಪ್ರವಾಸಕ್ಕೆ ಅನುಮತಿ ನೀಡಲು ನಿರಾಕರಿಸಿದೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಇವರ ವಿರುದ್ಧ ಈಗಾಗಲೇ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದು, ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ ಮತ್ತು ನ್ಯಾಯಮೂರ್ತಿ ಗೌತಮ ಅಂಕಡ್ ಅವರಿರುವ ಪೀಠ, ಈ ಮನವಿಯನ್ನು ನಿರಾಕರಿಸಿತು.

ಶಿಲ್ಪಾ ಶೆಟ್ಟಿ ಮತ್ತು ರಾಜ ಕುಂದ್ರಾ ದಂಪತಿ ಪರವಾಗಿ ವಕೀಲರು, ರಾಜ ಕುಂದ್ರಾ ತನಿಖಾ ಸಂಸ್ಥೆಗಳಿಗೆ ಸದಾ ಸಹಕಾರ ನೀಡುತ್ತಿದ್ದಾರೆ ಮತ್ತು ಈ ಸಲವೂ ಸಹ ತನಿಖೆಗೆ ಸಹಕಾರ ನೀಡುತ್ತಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಅವರು ತಮ್ಮ ವೃತ್ತಿಪರ ಬದ್ಧತೆ ಮತ್ತು ವ್ಯವಹಾರಗಳ ನಿಮಿತ್ತ ವಿದೇಶ ಪ್ರವಾಸ ಮಾಡಬೇಕಾಗುತ್ತದೆ ಎಂದು ವಾದಿಸಿದರು. ಶಿಲ್ಪಾ ಶೆಟ್ಟಿಯು ತನ್ನ ವೃತ್ತಿಪರ ಕಾರಣಗಳಿಂದಾಗಿ ಹೊರ ದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆದರೆ, ಸರ್ಕಾರಿ ವಕೀಲರು, ಆರೋಪಗಳು ಗಂಭೀರವಾಗಿದ್ದು, ತನಿಖೆ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಇವರಿಗೆ ಯಾವುದೇ ತಾತ್ಕಾಲಿಕ ಪರಿಹಾರ ನೀಡುವುದು ಸರಿಯಲ್ಲ ಎಂದು ವಾದಿಸಿದರು. ನ್ಯಾಯಾಲಯವು ಇದನ್ನು ಗಮನಕ್ಕೆ ತೆಗೆದುಕೊಂಡು “ಅರ್ಜಿದಾರರು ವೃತ್ತಿ ಮುಂದುವರಿಸಲು ಹಕ್ಕು ಹೊಂದಿದ್ದರೂ, ಪ್ರಕರಣದ ಗಂಭೀರತೆಯನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ” ಎಂದು ಹೇಳಿ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದೆ.
ಏತನ್ಮಧ್ಯೆ, ದಂಪತಿ 60 ಕೋಟಿ ರೂಪಾಯಿ ಹೂಡಿಕೆಯಲ್ಲಿ ಉದ್ಯಮಿ ದೀಪಕ ಕೊಠಾರಿಗೆ ಮೋಸಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಆ ಹಣವನ್ನು ಕಂಪನಿಯ ಹೂಡಿಕೆಗೆ ಬಳಸುವುದಾಗಿ ಹೇಳಿ, ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement