ಬೆಂಗಳೂರು : ಖ್ಯಾತ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನ

ಬೆಂಗಳೂರು : ಪದ್ಮಭೂಷಣ ಪುರಸ್ಕೃತ ಪತ್ರಕರ್ತ ಹಾಗೂ ಲೇಖಕ ಥಯ್ಯಲ್ ಜಾಕೋಬ್ ಸೋನಿ ಜಾರ್ಜ್(ಟಿಜೆಎಸ್‌ ಜಾರ್ಜ್‌) ಅವರು ಶುಕ್ರವಾರ (ಅಕ್ಟೋಬರ್ 3) ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟಿಜೆಎಸ್ ಜಾರ್ಜ್ 1928ರ ಮೇ 7ರಂದು ಕೇರಳದಲ್ಲಿ ಪತ್ತನಂತಿಟ್ಟ ಜಿಲ್ಲೆಯ ತುಂಬಮಣಿ ಎಂಬಲ್ಲಿ ಜನಿಸಿದ್ದರು. ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಮುಂಬೈನ ಫ್ರೀ ಪ್ರೆಸ್ ಜರ್ನಲ್‌ ಮೂಲಕ ಪತ್ರಕರ್ತರಾಗಿ ಅವರ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ದೇಶದ ಹಲವಾರು ಪ್ರಮುಖ ಮಾಧ್ಯಮಗಳಲ್ಲಿ ಕೆಲಸ ಮಾಡಿದರು.

ಅವರ ಹರಿತ ಲೇಖನ ಶೈಲಿ, ಸ್ಪಷ್ಟತೆ, ಮತ್ತು ನಿರ್ಭೀತ ಬರಹ ಪತ್ರಿಕೋದ್ಯಮದಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದ್ದವು. ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಬರುತ್ತಿದ್ದ ಅವರ “ಪಾಯಿಂಟ್ ಆಫ್ ವ್ಯೂ” ಎಂಬ ಸಾಪ್ತಾಹಿಕ ಅಂಕಣ 25 ವರ್ಷಗಳ ಕಾಲ ಓದುಗರ ಮನಗೆದ್ದಿತು. ಸಮಾಜದ ಅನ್ಯಾಯ, ಧಾರ್ಮಿಕ ಅಸಹಿಷ್ಣುತೆ, ಭ್ರಷ್ಟಾಚಾರ ಮುಂತಾದ ಸಂಗತಿಗಳ ವಿರುದ್ಧ ಅವರು ತಮ್ಮ ಬರಹದಲ್ಲಿ ಧೈರ್ಯದಿಂದ ಧ್ವನಿ ಎತ್ತಿದ್ದರು.
ಟಿಜೆಎಸ್ ಜಾರ್ಜ್ ಅವರು ಏಷ್ಯಾವೀಕ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು 2011ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಸಸ್ತಿಗೆ ಭಾಜನರಾದರು. 2019ರಲ್ಲಿ ಅವರು ಕೇರಳ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ಕೇಸರಿ ಪ್ರಶಸ್ತಿಗೂ ಭಾಜನರಾಗಿದ್ದರು.
ಟಿಜೆಎಸ್‌ ಜಾರ್ಜ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement