ಬೆಂಗಳೂರು : ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ವೇತನ ಸಹಿತ ಮುಟ್ಟಿನ ರಜೆ (Menstrual leave) ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಋತು ಚಕ್ರ ರಜೆ ನೀತಿ 2025 (Menstrual Leave Policy, 2025)ಗೆ ಇಂದು, ಗುರುವಾರಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಹೀಗಾಗಿ ಮಹಿಳಾ ಉದ್ಯೋಗಿಗಳಿಗೆ ವರ್ಷದಲ್ಲಿ 12 ದಿನ ವೇತನ ಸಹಿತ ರಜೆ ಸಿಗಲಿದೆ.
ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರೆ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತು ಚಕ್ರ (ಮುಟ್ಟಿನ) ರಜೆ ನೀಡಲಾಗುತ್ತದೆ. ಯಾವ ದಿನ ರಜೆ ಪಡೆಬೇಕು ಎಂಬುವುದನ್ನು ಮಹಿಳೆಯರು ತೀರ್ಮಾನ ಮಾಡಬಹುದಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ನೀಡಲಾಗಿದೆ. ವರ್ಷದಲ್ಲಿ 12 ದಿನ ರಜೆಯನ್ನು ಸಂಬಳ ಸಹಿತ ಕೊಡಲಾಗುತ್ತದೆ. ತಿಂಗಳಲ್ಲಿ ಯಾವ ದಿನ ಬೇಕಾದರೂ ಒಂದು ದಿನ ಮುಟ್ಟಿನ ರಜೆ ತೆಗೆದುಕೊಳ್ಳಬಹುದು. ಶೀಘ್ರವೇ ಕಾಯ್ದೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬಿಹಾರ, ಕೇರಳ, ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ಮುಟ್ಟಿನ ರಜೆ ನೀಡಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ