
ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಇನ್ಮುಂದೆ ʼಇಂದಿರಾ ಆಹಾರ ಕಿಟ್ʼ ವಿತರಣೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಹಾಲಿ ಪಡಿತರ ಚೀಟಿದಾರರಿಗೆ ಅನ್ನಭಾಗ್ಯದಲ್ಲಿ ಕೇಂದ್ರದಿಂದ 5 ಕೆಜಿ ಅಕ್ಕಿ ಹಾಗೂ ರಾಜ್ಯದಿಂದ 5 ಕೆಜಿ ಅಕ್ಕಿ ಒಟ್ಟು 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಇತರ ಆಹಾರ ಸಾಮಗ್ರಿಯುಳ್ಳ ಕಿಟ್ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಇಂದಿರಾ ಆಹಾರ ಕಿಟ್‌ನಲ್ಲಿ ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್ ಅಡುಗೆ ಎಣ್ಣೆ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ರಾಜ್ಯ ಕಾನೂನು ಹಾಗೂ ಸಂಸದೀಯ ಖಾತೆ ಸಚಿವ ಸಚಿವ ಎಚ್.ಕೆ.ಪಾಟೀಲ ಅವರು ಮಾಹಿತಿ ನೀಡಿದ್ದು, ಅನ್ನಭಾಗ್ಯದ ಅಕ್ಕಿ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿರುವ 6,426 ಕೋಟಿ ರೂ.ಗಳಲ್ಲಿ 6,119.52 ಕೋಟಿ ರೂ. ವಚ್ಚದಲ್ಲಿ ಇಂದಿರಾ ಆಹಾರ ಕಿಟ್ ಅನ್ನು ಒದಗಿಸಲು ಬಜೆಟ್ ಮರುಹಂಚಿಕೆ ಮಾಡುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮುಂಚೆ ಅಕ್ಕಿಯ ಅಭಾವ ಹಿನ್ನಲೆ ಫಲಾನುಭವಿಗಳ ಖಾತೆಗೆ 175 ರೂ. ಜಮಾ ಮಾಡಲಾಗುತ್ತಿತ್ತು. ಅಕ್ಕಿಯ ದರ ಇಳಿಕೆ ಆದ ಬಳಿಕ ಹಾಗೂ ಅಕ್ಕಿ ಕೊರತೆ ನೀಗಿದ ನಂತರ ಕಳೆದ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಈಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇಂದಿರಾ ಕಿಟ್‌ನಲ್ಲಿ ರಾಜ್ಯ ಸರ್ಕಾರ ನೀಡುವ 5 ಕೆಜೆ ಅಕ್ಕಿಯ ಬದಲಿಗೆ ಪೌಷ್ಟಿಕ ಆಹಾರ ಇರುವ ಇಂದಿರಾ ಕಿಟ್ ವಿತರಣೆಗೆ ವಿತರಣೆಗೆ ಸಂಪುಟ ಸಭೆ ನಿರ್ಧರಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ