ಶಿರಸಿ: ಸುದೀರ್ಘ 25 ವರ್ಷ ಒಂದೇ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಪ್ರಸ್ತುತ ಜನಮಾಧ್ಯಮ ದಿನ ಪತ್ರಿಕೆಯಲ್ಲಿಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ರವಿ ನಾಯ್ಕ ಅವರಿಗೆ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು.
ಅವರು ಸೋಮವಾರ ತಾಲೂಕಿನ ಗೌಡಳ್ಳಿಯ ಚಂದನ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಅಲ್ಲದೆ, ಲೋಕಧ್ವನಿ ದಿನ ಪತ್ರಿಕೆಯ ಹಿರಿಯ ಉಪ ಸಂಪಾದಕ ಗಣೇಶ ಮುರೇಗಾರ ಅವರಿಗೆ ಗೋಲ್ಡನ್ ಪೆನ್ ಪುರಸ್ಕಾರ ನೀಡಿ ಗೌರವಿಸಲಾಯಿತು. ದಿ. ಮತ್ತಿಗಾರ ಸುಬ್ಬಣ್ಣ ದತ್ತಿನಿಧಿ ಪುರಸ್ಕಾರವನ್ನು ತತ್ತ್ವನಿಷ್ಠ ದಿನ ಪತ್ರಿಕೆಯ ಹಿರಿಯ ಉಪ ಸಂಪಾದಕ ಯೋಗೀಶ ಹೆಗಡೆ ಗಡಿಹಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು. ಕಬ್ನಳ್ಳಿ ದಿ. ಸರೋಜಾ ಮತ್ತು ಛತ್ರಪತಿ ಹೆಗಡೆ ದತ್ತಿನಿಧಿ ಪುರಸ್ಕಾರವನ್ನು ಮಾರಿಕಾಂಬಾ ವಾಹಿನಿಯ ವರದಿಗಾರ ಮಹಾದೇವ ನಾಯ್ಕ ಅವರಿಗೆ ಹಾಗೂ ದಿ. ಲಕ್ಷ್ಮೀ ಗೋಪಾಲಕೃಷ್ಣ ಭಟ್ಟ ದತ್ತಿನಿಧಿ ಪುರಸ್ಕಾರವನ್ನು ಹಿರಿಯ ಪತ್ರಿಕಾ ವಿತರಕ ಎಸ್.ಎಸ್. ಧಾರೇಶ್ವರ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಅವರು, ಪತ್ರಕರ್ತರ ಲೇಖನಿ ಸಮಾಜದ ಸಂಘರ್ಷಗಳಿಗೆ ತುಪ್ಪ ಸುರಿಯುವಂತಿರದೆ, ಸಮಾಜದ ಅಂಕು-ಡೊಂಕುಗಳನ್ನು ತಿದ್ದು ಸರಿಪಡಿಸುವಂತಿರಬೇಕು ಎಂದು ಹೇಳಿದರು.ಸಮಾಜವನ್ನು ಸುಸ್ಥಿತಿಯಲ್ಲಿಡುವಲ್ಲಿ ಪತ್ರಕರ್ತರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಪತ್ರಿಕೆಗಳು ಬರೆಯುವವರ ಸ್ವತ್ತಾಗದೇ, ಓದುಗರ ಸ್ವತ್ತಾಗಬೇಕು. ಆಗ ಮಾತ್ರ ಅವು ದೀರ್ಘಕಾಲ ಜೀವಂತವಾಗಿರಲು ಸಾಧ್ಯ. ವೈಯಕ್ತಿಕ ತೇಜೋವಧೆ ಮಾಡುವಂತಹ ವರದಗಾರಿಕೆಯು ನಿಲ್ಲಬೇಕು. ಅಭಿವೃದ್ಧಿ ವಿಷಯದಲ್ಲಿ ಮಾಧ್ಯಮಗಳ ಟೀಕೆಗಳು ಸಹಜವಾಗಿದ್ದರೂ, ವೈಯಕ್ತಿಕ ಟೀಕೆಗಳು ಸರಿಯಲ್ಲ. ವೈಯಕ್ತಿಕ ಟೀಕೆಗಳ ಬದಲಾಗಿ ಸಮಾಜವನ್ನು ತಿದ್ದುವ, ಎಚ್ಚರಿಸುವ ಹಾಗೂ ಜನಪ್ರತಿನಿಧಿಗಳಿಗೆ ಅವರ ಹೊಣೆಗಾರಿಕೆ ಬಗ್ಗೆ ಎಚ್ಚರಿಸುವ ವರದಿಗಾರಿಕೆಗಳು ಬರಬೇಕು. ರಾಜಕಾರಣಿಗಳ ಹೊಣೆಗಾರಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಟೀಕೆಗಳು ಬಂದಾಗ ಅವರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ದೊರೆಯುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲೆಯು ಅನೇಕ ಪ್ರತಿಭಾವಂತ ಪತ್ರಕರ್ತರು ಹಾಗೂ ರಾಜಕಾರಣಿಗಳಿಗೆ ನೆಲೆಯಾದ ಭೂಮಿಯಾಗಿದೆ. ಜಿ.ಎಸ್. ಹೆಗಡೆ ಅಜ್ಜೀಬಳ ಅವರಿಂದ ಹಿಡಿದು ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಪತ್ರಿಕಾ ರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಅನೇಕ ಹಿರಿಯ ಪತ್ರಕರ್ತರು ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಿರಿಯ ಪತ್ರಕರ್ತರ ಆದರ್ಶ, ತತ್ವ ಹಾಗೂ ಸಿದ್ಧಾಂತಗಳನ್ನು ಯುವ ಪತ್ರಕರ್ತರು ಮುಂದುವರಿಸಬೇಕು.
ಅನೇಕ ಮಾಧ್ಯಮಗಳ ಟೀಕೆಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದರಿಂದಲೇ ನಾನು ಸುಮಾರು 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗಿದೆ. ಟೀಕೆಗಳನ್ನು ಸ್ವೀಕರಿಸಿ ಮುನ್ನಡೆಯದ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದರು.
ಮಾಧ್ಯಮ ಶ್ರೀ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ರವಿ ನಾಯ್ಕ ಸುಮಾರು 25 ವರ್ಷಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ ನೀಡಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಅವರು ಸಮಾಜದ ಆಸ್ತಿಯಾಗುತ್ತಾರೆ. ಸಮಾಜಕ್ಕೆ ರೋಗ ಬಂದಾಗ ಅದನ್ನು ಗುಣಪಡಿಸುವ ಶಕ್ತಿ ಪತ್ರಕರ್ತನಲ್ಲಿದೆ. ಸಮಾಜವು ಪತ್ರಕರ್ತರನ್ನು ಸದಾ ಗಮನಿಸುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ಬರಹ, ವರದಿಗಾರಿಕೆ ಹಾಗೂ ನಡೆ-ನುಡಿಯಲ್ಲಿ ಎಚ್ಚರವಹಿಸಬೇಕು ಎಂದರು.
ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರವಿ ನಾಯ್ಕ ಮಾತನಾಡಿ, ಕಳೆದ 27 ವರ್ಷಗಳ ಪತ್ರಿಕಾ ಜೀವನದಲ್ಲಿ ಅನೇಕ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ದೊರೆತಿದೆ. ನನ್ನ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನಾನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ನೆರವು ಮತ್ತು ಪ್ರೋತ್ಸಾಹದಿಮದ ಈ ಮಟ್ಟಕ್ಕೆ ಬಂದಿದ್ದೇನೆ. ನಾನು ಅವರಿಗೆ ಸದಾ ಋಣಿ ಎಂದರು.
ಮಿಯಾರ್ಡ್ಸ್ ಸಂಸ್ಥೆಯ ಸಂಸ್ಥಾಪಕ ಎಲ್.ಎಂ. ಹೆಗಡೆ ಮಾತನಾಡಿ, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿದ್ಯಾರ್ಥಿಯನ್ನು ಶಿಕ್ಷಣದಿಂದ ವಂಚಿಸುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಿಕೊಂಡು ಹೋಗುವುದು ನಮ್ಮ ಪ್ರಮುಖ ಗುರಿಯಾಗಿದೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದೆ, ಭಿನ್ನಾಭಿಪ್ರಾಯಗಳು ಉಂಟಾದರೆ ಸಮಾಲೋಚನೆಯ ಮೂಲಕ ಬಗೆಹರಿಸಿಕೊಂಡು ಸಂಘವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪ್ರಬುದ್ಧತೆಯಿಂದ ಪತ್ರಕರ್ತರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಂಘವನ್ನು ಮುನ್ನಡೆಸುವ ದೃಢ ಸಂಕಲ್ಪ ನಮ್ಮ ಮುಂದಿದೆ ಎಂದರು.
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಪ್ರಾಸ್ತಾವಿಕ ಮಾತನಾಡಿ, ಇಂದು ವಾಣಿಜ್ಯ, ವಿಜ್ಞಾನ, ಕಲೆ, ಪ್ರವಾಸಿ ಪತ್ರಿಕೋದ್ಯಮಗಳು ಬೆಳೆಯುತ್ತಿವೆ. ವಿಜ್ಞಾನ, ವಾಣಿಜ್ಯದ ವಿದ್ಯಾರ್ಥಿಗಳೂ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದು ಪತ್ರಿಕೋದ್ಯಮವನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂದರು. .
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನ ಗೌಡ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ಚಂದನ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ವಿ.ಜಿ. ಜೋಶಿ ಮತ್ತಿತರರು ವೇದಿಕೆಯಲ್ಲಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಾಟೀಲ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ ಹೊನ್ನಾವರ ವಂದಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ