ಉಡುಪಿ: ಮೀನು ಹಿಡಿಯಲು (Fishing) ಸಮುದ್ರಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಬೈಂದೂರು (Baindur) ತಾಲೂಕಿನ ಕಿರಿಮಂಜೇಶ್ವರ ಬಳಿ ನಡೆದಿದೆ ಎಂದು ವರದಿಯಾಗಿದೆ.
ಕಿರಿಮಂಜೇಶ್ವರ ಬಳಿ ಹೊಸಹಿತ್ಲು ಬೀಚ್‌ನಲ್ಲಿ (Hosahithlu Beach) ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಾದ ಸಂಕೇತ (16), ಸೂರಜ (15) ಹಾಗೂ ಆಶಿಶ್ (14) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ ಮೂವರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ.
ನಾಲ್ಕು ಮಂದಿ ಮಕ್ಕಳು ಮಂಗಳವಾರ ಸಂಜೆ ಆಟವಾಡಿ, ನಂತರ ಮೀನು ಹಿಡಿಯಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ ಅವರು ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಡೆಯಾಗಿದ್ದಾರೆ. ನಾಲ್ವರ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದರೂ ಫಲ ನೀಡಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ