ಬೆಂಗಳೂರು: ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ಕತ್ತಿ ಹಿಡಿದು ಬೆದರಿಸಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳರು ಕಸಿದುಕೊಂಡ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ.
ಮಹಿಳೆ ವಿರೋಧಿಸಿದಾಗ, ಸರಗಳ್ಳ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಇಬ್ಬರು ಸರಗಳ್ಳರಾದ ಪ್ರವೀಣ ಮತ್ತು ಯೋಗಾನಂದ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಭಯಾನಕ ಘಟನೆ ಸೆಪ್ಟೆಂಬರ್ 13 ರ ರಾತ್ರಿ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಈಶ್ವರಿ ನಗರ ಪ್ರದೇಶದಲ್ಲಿ ಗಣೇಶ ಉತ್ಸವ ಆರ್ಕೆಸ್ಟ್ರಾ ಮುಗಿಸಿಕೊಂಡು ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಮನೆಗೆ ಹಿಂತಿರುಗುತ್ತಿದ್ದರು. ಸರಗಳ್ಳರು ಪಲ್ಸರ್ ಬೈಕ್‌ನಲ್ಲಿ ಹಿಂದಿನಿಂದ ಬಂದು ಅವರನ್ನು ಅಡ್ಡಗಟ್ಟಿದ್ದಾರೆ. ಕತ್ತಿ ತೋರಿಸಿ ಹೆದರಿಸಿ ಚಿನ್ನದ ಸರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.
ಭಯಭೀತರಾದ ಉಷಾ ತನ್ನ ಸರಕನ್ನು ಕಳ್ಳರಿಗೆ ನೀಡಿದರು. ಆದರೆ ವರಲಕ್ಷ್ಮಿ ದಾಳಿಯನ್ನು ವಿರೋಧಿಸಿದರು. ಈ ವೇಳೆ, ಕಳ್ಳ ಯೋಗಾನಂದ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆಕೆಯ ಎರಡು ಬೆರಳುಗಳನ್ನು ಕತ್ತರಿಸಿದ್ದಾನೆ. ಮಹಿಳೆಯ ಮೇಲೆ ದಾಳಿ ಮಾಡಿದ ನಂತರ, ಇಬ್ಬರೂ ಕಳ್ಳರು 55 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವಾರಗಳ ಹುಡುಕಾಟದ ನಂತರ, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಆರೋಪಿ ಯೋಗಾನಂದ ಕ್ರಿಮಿನಲ್ ದಾಖಲೆ ಹೊಂದಿದ್ದು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಚಿನ್ನವನ್ನು ಕದ್ದ ನಂತರ, ಆತ ಬೆಂಗಳೂರಿನಿಂದ ಪಲಾಯನ ಮಾಡಿ, ಪುದುಚೇರಿ, ಮುಂಬೈ ಮತ್ತು ಗೋವಾ ಮೂಲಕ ಮದ್ದೂರು ಬಳಿಯ ತನ್ನ ಸ್ವಂತ ಗ್ರಾಮವಾದ ಮಾರ್ಸಿಂಗನಹಳ್ಳಿಗೆ ಮರಳಿದ್ದ.
ಗಾಯಗೊಂಡ ಮಹಿಳೆ ವರಲಲಕ್ಷ್ಮೀ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮತ್ತು ಸಂಭಾವ್ಯ ಸಹಚರರ ಬಗ್ಗೆ ಹೆಚ್ಚಿನ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ