ಚಿತ್ತಾಪುರದಲ್ಲಿ ಆರ್‌ ಎಸ್‌ ಎಸ್‌ ಪಥಸಂಚಲ ; ಹೊಸದಾಗಿ ಅರ್ಜಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಕಲಬುರಗಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮತ್ತು ವಿಜಯದಶಮಿ ಉತ್ಸವದ ಭಾಗವಾಗಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ 2ಕ್ಕೆ ಉದ್ದೇಶಿಸಿರುವ ಆರ್‌ಎಸ್‌ಎಸ್‌ ಪಥಸಂಚಲನ, ಸ್ಥಳ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕೈಗೊಂಡಿರುವ ನಿರ್ಣಯದ ವರದಿಯನ್ನು ಅಕ್ಟೋಬರ್‌ 24ಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಭಾನುವಾರ ನಿರ್ದೇಶಿಸಿದೆ.
ಚಿತ್ತಾಪುರದಲ್ಲಿ ಅಕ್ಟೋಬರ್‌ 19ರ ಮಧ್ಯಾಹ್ನ 3ಕ್ಕೆ ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಶೀಲ್ದಾರ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್‌ ಕಲಬುರ್ಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ವಿಶೇಷ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ವಿಚಾರಣೆ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದರಿಂದ ಹಲವು ಸಂಘಟನೆಗಳು ಒಂದೇ ದಿನ, ಒಂದೇ ಸ್ಥಳ ಮತ್ತು ಒಂದೇ ಮಾರ್ಗದಲ್ಲಿ ರ‍್ಯಾಲಿ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದ್ದಾರೆ. ಆದ ಕಾರಣ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕಗಳಂದು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್​​ ತಿಳಿಸಿತು.

ಪ್ರಮುಖ ಸುದ್ದಿ :-   ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಆದ್ದರಿಂದ ಇದೇ ದಿನ ಹೊಸದಾಗಿ ಮನವಿ ಸಲ್ಲಿಸಿ, ಯಾವ ಮಾರ್ಗದಲ್ಲಿ ರ‍್ಯಾಲಿ ನಡೆಸಲಾಗುವುದು ಎಂಬುದನ್ನು ತಿಳಿಸಿ, ಜಿಲ್ಲಾಡಳಿತ ಮತ್ತು ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್​​ಗೆ ಮನವಿ ಸಲ್ಲಿಸಬೇಕು. ಅದರಂತೆ, ಜಿಲ್ಲಾ ಮತ್ತು ತಾಲೂಕು ಆಡಳಿತ ರ‍್ಯಾಲಿಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ ಪೀಠ, ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement