ಹಾವೇರಿ | ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ; ಹೋರಿ ತಿವಿದು ಮೂವರು ಸಾವು

ಹಾವೇರಿ: ದೀಪಾವಳಿ ಹಬ್ಬದ ನಿಮಿತ್ತ ಹಾವೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಹಾಯ್ದು ಮೂವರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಹಾವೇರಿಯ ದಾನೇಶ್ವರಿ ನಗರದ ಚಂದ್ರಶೇಖರ ಕೋಡಿಹಳ್ಳಿ ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ (75) ಎಂಬವರು ಮನೆಗೆ ಹೊರಟಿದ್ದ ವೇಳೆ ಹಿಂದಿನಿಂದ ಹೋರಿ ಹಾಯ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ದಾನೇಶ್ವರಿ ನಗರದ ಬರೋಡಾ ಬ್ಯಾಂಕ್ ಎದುರುಗಡೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ‌ಲ್ಲಿ ದೀಪಾವಳಿ ಹಬ್ಬದ ಆಚರಣೆ ಸಂದರ್ಭ ಎತ್ತುಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಒಂದು ಎತ್ತು ಬೆದರಿ ಓಡಿಬಂದು ತಿವಿದ ಪರಿಣಾಮ ಘನಿಸಾಬ್ (75) ಎಂಬವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿ ಮನೆಗೆ ನುಗ್ಗಿ ಮನೆ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಅವರಿಗೆ ಹೋರಿ ತಿವಿದಿದೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಹಾವೇರಿಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಫಲಕಾರಿಯಾಗಿಲ್ಲ ಎಂದು ಹೇಳಲಾಗಿದೆ.
ಹಾನಗಲ್ ತಾಲೂಕಿನ ತಿಳವಳ್ಳಿಯಲ್ಲಿ ಹೋರಿ ತಿವಿದು ಯುವಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಬುಧವಾರ ಸಂಜೆ ತಿಳವಳ್ಳಿ ಸಮೀಪದ ದುರ್ಗಾಂಬಿಕಾ ದಾಬಾ ಬಳಿ ಘಟನೆ ನಡೆದಿದ್ದು, ಗಾಯಾಳು ಭರತ (24) ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ‌ ಫಲಿಸಲಿಲ್ಲ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement