ಬೀದಿಗಳಲ್ಲಿ ಕಸ ಎಸೆದರೆ, ನಿಮ್ಮ ಮನೆ ಮುಂದೆ ಕಸ ಸುರಿದು ದಂಡ…! ಬೇಕಾಬಿಟ್ಟಿ ಕಸ ಎಸೆಯುವವರ ವಿರುದ್ಧ ಜಿಬಿಎ ವಿನೂತನ ಕ್ರಮ

 ಬೆಂಗಳೂರು: ರಸ್ತೆಗಳಲ್ಲಿ ಕಸ ಎಸೆಯುವ ಬೆಂಗಳೂರಿನ ನಿವಾಸಿಗಳಿಗೆ ತೀವ್ರ ಎಚ್ಚರಿಕೆ ನೀಡಲಾಗಿದೆ. ನೀವು ರಸ್ತೆಯ ಮೇಲೆ ಕಸ ಎಸೆದರೆ, ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಅದನ್ನು ನಿಮ್ಮ ಮನೆ ಬಾಗಿಲಿಗೇ ವಾಪಸ್ ಎಸೆಯಲಿದೆ.
ಜಿಬಿಎ (GBA) ಯ “ಕಸ ಎಸೆಯುವ ಹಬ್ಬ” ಎಂಬ ಈ ವಿನೂತನ ಉಪಕ್ರಮವು, ನಗರವನ್ನು ಕೊಳಕು ಮಾಡುವ ಜನರ ಮನೆ ಬಾಗಿಲಿಗೆ ಅವರೇ ಎಸೆದ ಕಸವನ್ನು ಮರಳಿ ಸುರಿಯುವ ಮೂಲಕ ಕಸ ಎಸೆಯುವ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ. ಹಾಗೂ ₹ 2,000 ದಂಡವನ್ನು ಸಹ ವಿಧಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಪ್ರಬಲ ಪಾಠ ಕಲಿಸಲು ಈ ಉಪಕ್ರಮವನ್ನು ಜಾರಿಗೊಳಿಸಲಾಗಿದೆ. ಜಿಬಿಎ ಸಿಬ್ಬಂದಿ ಈಗಾಗಲೇ ಕಸವನ್ನು ಎಲ್ಲೆಂದರಲ್ಲಿ ಬೀಸಾಕಿದ್ದವರ 218 ಮನೆಗಳ ಮುಂದೆ ಕಸವನ್ನು ವಾಪಸ್ ಸುರಿದಿದೆ. ಹಾಗೂ ಒಟ್ಟು 2.8 ಲಕ್ಷ ರೂ. ದಂಡ ವಸೂಲಿ ಮಾಡಿದೆ.

‘ರಿಟರ್ನ್ ಗಿಫ್ಟ್’
“ಒಣ ಮತ್ತು ಹಸಿ ಕಸ ಸಂಗ್ರಹಕ್ಕಾಗಿ ಬೆಂಗಳೂರಿನಲ್ಲಿ ಸುಮಾರು 5,000 ಆಟೋಗಳು ಮನೆಗಳಿಗೆ ಹೋಗುತ್ತವೆ. ಆದರೂ ಕೆಲವರು ರಸ್ತೆಗಳಲ್ಲಿ ಕಸ ಎಸೆಯುತ್ತಾರೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಹೇಳಿದ್ದಾರೆ. ಅವರ ಪ್ರಕಾರ, ರಸ್ತೆಯಲ್ಲಿ ಕಸ ಎಸೆಯುವ ಜನರ ವೀಡಿಯೊಗಳನ್ನು BSWML ಗೆ ನಾಗರಿಕರು ಕಳುಹಿಸುತ್ತಾರೆ, ಮತ್ತು ಕಣ್ಗಾವಲುಗಾಗಿ ಸಿಸಿಟಿವಿ (CCTV) ಗಳನ್ನು ಸಹ ಅಳವಡಿಸಲಾಗಿದೆ. ರಸ್ತೆಯಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸಲು, ಈ ಉಪಕ್ರಮವು ಒಂದು ರೀತಿಯ ‘ರಿಟರ್ನ್ ಗಿಫ್ಟ್’ ಇದ್ದಂತೆ” ಎಂದು ಅವರು ಹೇಳಿದರು. ಕಸವನ್ನು ಮರಳಿ ಸುರಿಯುವುದರ ಜೊತೆಗೆ, ₹ 2,000 ದಂಡವನ್ನು ಸಹ ವಿಧಿಸಲಾಗುತ್ತದೆ.

ಬೆಂಗಳೂರು “ಉದ್ಯಾನ ನಗರಿ” ಎಂಬುದನ್ನು ಒತ್ತಿ ಹೇಳಿದ ಅಧಿಕಾರಿ, ಬೇಕಾಬಿಟ್ಟಿ ಕಸ ಎಸೆಯದೆ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಜನರಲ್ಲಿ ಅವರು ಮನವಿ ಮಾಡಿದರು.
ಪತ್ತೆ ಮಾಡುವುದು ಹೇಗೆ?
ಸಿಸಿಟಿವಿಗಳ (CCTVs) ಮೂಲಕ ಕಸ ಎಸೆದವರನ್ನು ಪತ್ತೆ ಮಾಡಲಾಗುತ್ತದೆ ಮತ್ತು ಅಂತಹ ಕೃತ್ಯವನ್ನು ಕಂಡಾಗಲೆಲ್ಲಾ ಅಧಿಕಾರಿಗಳು ವೀಡಿಯೊ ರೆಕಾರ್ಡ್‌ ಮಾಡುತ್ತಾರೆ ಎಂದು ಹೇಳಿದರು. ಕೆಲವು ಪ್ರದೇಶಗಳಲ್ಲಿ ಕಸ ಸಂಗ್ರಹಕಾರರ ಲಭ್ಯತೆಯ ಕೊರತೆಯಿಂದಾಗಿ ಜನರು ರಸ್ತೆಯಲ್ಲಿ ಕಸ ಎಸೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಸ್ಥಳಗಳಲ್ಲಿ ಕಸವನ್ನು ವಿಲೇವಾರಿ ಮಾಡಲು ದೊಡ್ಡ ಕಸದ ತೊಟ್ಟಿಗಳನ್ನು (dustbins) ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement