ನ್ಯೂಯಾರ್ಕ್‌ ಮೇಯರ್ ಆಗಿ ಭಾರತೀಯ ಮೂಲದ ಜೋಹ್ರಾನ್ ಮಾಮ್ದಾನಿ ಐತಿಹಾಸಿಕ ಗೆಲುವು

ನ್ಯೂಯಾರ್ಕ್ ಸಿಟಿ: ಅಮೆರಿಕಾದ ಡೆಮೋಕ್ರಾಟ್ ಪಕ್ಷಕ್ಕೆ ಒಂದು ದೊಡ್ಡ ಗೆಲುವಿನಲ್ಲಿ ರಾಜ್ಯದ ಶಾಸಕರಾಗಿದ್ದ ಭಾರತೀಯ ಮೂಲದ ಜೋಹ್ರಾನ್ ಮಾಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮಾಮ್ದಾನಿ ಅವರು ಈ ಚುನಾವಣೆಯಲ್ಲಿ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೋಮೊ ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಅವರು ನಗರದ ಮೊದಲ ಮುಸ್ಲಿಂ ಮೇಯರ್, ಮೊದಲ ದಕ್ಷಿಣ ಏಷ್ಯಾ ಮೂಲದ ಮೇಯರ್ ಮತ್ತು ಆಫ್ರಿಕಾದಲ್ಲಿ ಜನಿಸಿದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನವರಿ 1 ರಂದು ಅಧಿಕಾರ ಸ್ವೀಕರಿಸಲಿರುವ ಅವರು, ಕಳೆದ ಒಂದು ಶತಮಾನದಲ್ಲೇ ನಗರದ ಕಿರಿಯ ಮೇಯರ್ ಸಹ ಆಗಲಿದ್ದಾರೆ.
ಗೆಲುವಿನ ನಂತರ ತಮ್ಮ ಮೊದಲ ‘ಎಕ್ಸ್’ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ಮಾಮ್ದಾನಿ ಅವರು ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನ್ಯೂಯಾರ್ಕ್ ಸಬ್‌ವೇ ರೈಲು ಸಿಟಿ ಹಾಲ್ ನಿಲ್ದಾಣದಲ್ಲಿ ಬಾಗಿಲು ತೆರೆಯುವುದನ್ನು ತೋರಿಸಲಾಗಿದ್ದು, ಗೋಡೆಯ ಮೇಲೆ “Zohran For New York City” ಎಂಬ ಬರಹ ಮೂಡಿದೆ. ಹಿನ್ನೆಲೆಯಲ್ಲಿ, “ಮುಂದಿನ ಮತ್ತು ಕೊನೆಯ ನಿಲ್ದಾಣ ಸಿಟಿ ಹಾಲ್” ಎಂಬ ಘೋಷಣೆ ಕೇಳಿಬರುತ್ತದೆ. ಸಿಟಿ ಹಾಲ್ (City Hall) ಮೇಯರ್ ಕಚೇರಿ ಇರುವ ಸ್ಥಳವಾಗಿದೆ.

ಪ್ರಮುಖ ಸುದ್ದಿ :-   ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

ಜೋಹ್ರಾನ್ ಮಾಮ್ದಾನಿಯವರ ಕುರಿತು…
ಮಾಮ್ದಾನಿ ಅವರು ಅಕ್ಟೋಬರ್ 18, 1991 ರಂದು ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು. ಇವರು ಉಗಾಂಡಾದ ಭಾರತದ ಗುಜರಾತ್‌ ಮೂಲದ ಮಹ್ಮೂದ್ ಮಾಮ್ದಾನಿ ಮತ್ತು ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ. ಬಾಲ್ಯದಲ್ಲಿ ಉಗಾಂಡಾದಿಂದ ದಕ್ಷಿಣ ಆಫ್ರಿಕಾಕ್ಕೆ, ನಂತರ ನ್ಯೂಯಾರ್ಕ್ ಸಿಟಿಗೆ ಬಂದರು. ಅಲ್ಲಿ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ ಮತ್ತು ಬೌಡೋಯಿನ್ ಕಾಲೇಜಿನಲ್ಲಿ ಆಫ್ರಿಕಾನಾ ಸ್ಟಡೀಸ್‌ನಲ್ಲಿ ಪದವಿ ಪಡೆದರು.
ಪ್ರಗತಿಪರ ಚುನಾವಣಾ ಅಜೆಂಡಾ
ಮಾಮ್ದಾನಿ ತಮ್ಮ ಚುನಾವಣಾ ಪ್ರಚಾರವನ್ನು ನಗರವನ್ನು ಹೆಚ್ಚು ಕೈಗೆಟುಕುವಂತೆ ಮಾಡುವತ್ತ ಕೇಂದ್ರೀಕರಿಸಿದರು. ಅವರ ಪ್ರಮುಖ ಪ್ರಸ್ತಾಪಗಳು:
ಬಾಡಿಗೆ ಸ್ಥಿರಗೊಂಡಿರುವ ಮನೆಗಳ ಬಾಡಿಗೆಯನ್ನು ಹೆಚ್ಚಿಸದಿರುವುದು, 2 ಲಕ್ಷ ಸಾರ್ವಜನಿಕ ವಸತಿ ಘಟಕಗಳ ನಿರ್ಮಾಣ, ಕಡ್ಡಾಯ ಶಿಶುಪಾಲನಾ ಕೇಂದ್ರ, ಉಚಿತ ಶಿಕ್ಷಣ, ಬಸ್ಸುಗಳಲ್ಲಿ ಉಚಿತ ಪ್ರಯಾಣ ಇತ್ಯಾದಿಗಳನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ.

ಟ್ರಂಪ್ ಜೊತೆ ಜಟಾಪಟಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಮ್ದಾನಿಯನ್ನು ಸುಳ್ಳಾಗಿ ‘ಕಮ್ಯುನಿಸ್ಟ್’ ಎಂದು ಹಣೆಪಟ್ಟಿ ಕಟ್ಟಿ, ಈ ಸ್ಪರ್ಧೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಗೆದ್ದರೆ ನಗರವನ್ನು ವಶಪಡಿಸಿಕೊಳ್ಳುವುದಾಗಿ ಮತ್ತು ಮಾಮ್ದಾನಿಯನ್ನು ಬಂಧಿಸಿ ಗಡೀಪಾರು ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.
ಈ ಚುನಾವಣೆಯು ಕಳೆದ 50 ವರ್ಷಗಳಲ್ಲಿ ಕಂಡ ಅತ್ಯಂತ ದೊಡ್ಡ ಮತದಾನವನ್ನು ದಾಖಲಿಸಿತು. ನಗರದ ಚುನಾವಣಾ ಮಂಡಳಿಯ ಪ್ರಕಾರ, 20 ಲಕ್ಷಕ್ಕೂ ಹೆಚ್ಚು ನ್ಯೂಯಾರ್ಕ್‌ ನಿವಾಸಿಗಳು ತಮ್ಮ ಮತ ಚಲಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement