ಮಾಜಿ ಪ್ರಿಯಕರನ ಸಿಲುಕಿಸಲು ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಕಳುಹಿಸಿದ್ದ ಮಹಿಳಾ ಟೆಕ್ಕಿ ಬಂಧನ

ಬೆಂಗಳೂರು: ನಗರದ ಹಲವು ಶಾಲೆಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಶೈಕ್ಷಣಿಕ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಇ ಮೇಲ್‌ಗಳನ್ನು ಕಳುಹಿಸಿದ ಆರೋಪದ ಮೇಲೆ 30 ವರ್ಷದ ಮಹಿಳಾ ರೋಬೋಟಿಕ್ ಇಂಜಿನಿಯರ್‌ ಅನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಗುರುವಾರ (ನವೆಂಬರ್ 6) ಬಂಧಿಸಿದ್ದಾರೆ.
ಖ್ಯಾತ ಸಂಸ್ಥೆಯೊಂದರಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಆರೋಪಿಯನ್ನು ಗುಜರಾತ್ ಮೂಲದ ರೆನೆ ಜೋಶೀಲ್ಡಾ ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನ ಕನಿಷ್ಠ ಏಳು ಶಾಲೆಗಳು ಮಾತ್ರವಲ್ಲದೆ, ಚೆನ್ನೈ, ಹೈದರಾಬಾದ್, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಹರಿಯಾಣ ಸೇರಿದಂತೆ ಒಟ್ಟು 11 ರಾಜ್ಯಗಳ ಶೈಕ್ಷಣಿಕ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾಂತ್ರಿಕ ಪರಿಣತಿ ಬಳಸಿ ಕೃತ್ಯ….
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ತನ್ನ ಸ್ಥಳವನ್ನು ಮರೆಮಾಚಲು ವಿಪಿಎನ್ (VPN) ಸೇವೆಗಳನ್ನು ಬಳಸಿದ್ದಳು. ‘ಗೇಟ್ ಕೋಡ್’ (Gate Code) ಎಂಬ ಅಪ್ಲಿಕೇಶನ್ ಮೂಲಕ ಸೃಷ್ಟಿಸಲಾದ ವರ್ಚುವಲ್ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಇಮೇಲ್‌ಗಳನ್ನು ಕಳುಹಿಸಿದ್ದಾಳೆ. ಈ ನಕಲಿ ಕೃತ್ಯವನ್ನು ನಡೆಸಲು, ಆಕೆ ಬೇರೆ ಬೇರೆ ಗುರುತಿನ ಅಡಿಯಲ್ಲಿ ಆರೇಳು ವಾಟ್ಸಾಪ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಪ್ರತೀಕಾರಕ್ಕಾಗಿ ಪ್ರಿಯಕರನ ಹೆಸರಲ್ಲಿ ಕೃತ್ಯ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಜೋಶೀಲ್ಡಾ ಅವರು ಪ್ರಭಾಕರ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆದರೆ, ಾವರು ಫೆಬ್ರವರಿಯಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾದ ನಂತರ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮತ್ತು ಅವರನ್ನು ಇದರಲ್ಲಿ ಸಿಲುಕಿಸುವ ಅಥವಾ ಮುಜುಗರಕ್ಕೀಡು ಮಾಡುವ ಉದ್ದೇಶದಿಂದ ಆತನ ಹೆಸರಿನಲ್ಲೇ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಈಕೆ ಗುಜರಾತಿನಲ್ಲಿ 21 ನಕಲಿ ಬಾಂಬ್ ಬೆದರಿಕೆಗಳು ಮತ್ತು ಬೆಂಗಳೂರಿನಲ್ಲಿ ಆರು ಬೆದರಿಕೆಗಳನ್ನು ಕಳುಹಿಸಿದ್ದು, ಇದು ಬಹು ಶಾಲೆಗಳಲ್ಲಿ ವ್ಯಾಪಕ ಆತಂಕ ಮತ್ತು ಭದ್ರತಾ ಎಚ್ಚರಿಕೆಗೆ ಕಾರಣವಾಗಿತ್ತು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಸಮನ್ವಯ ತನಿಖೆ ಆರಂಭ
ಬೆಂಗಳೂರಿನಲ್ಲಿ ಇಂತಹ ಬೆದರಿಕೆಗಳ ಹೆಚ್ಚಳದ ನಂತರ, ಪೊಲೀಸ್ ಕಮಿಷನರ್ ಸೀಮಂತಕುಮಾರ ಸಿಂಗ್ ಅವರು ಜಂಟಿ ಪೊಲೀಸ್ ಕಮಿಷನರ್ (ಪಶ್ಚಿಮ) ವಂಶಿ ಕೃಷ್ಣ ಮತ್ತು ಡಿಸಿಪಿ (ಉತ್ತರ) ನೇಮಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ಸಿಇಎನ್ ಎಸಿಪಿ ಪವನ್ ಅವರು ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣಗಳಲ್ಲಿ ಚೆನ್ನೈ ಪೊಲೀಸರು ಈ ಹಿಂದೆ ಜೋಶೀಲ್ಡಾ ಅವರನ್ನು ಬಂಧಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗ ಅಂತರ್-ರಾಜ್ಯ ಸಮನ್ವಯ ತನಿಖೆ ನಡೆಯುತ್ತಿದೆ.

ಮೋಟೆರಾದ ನರೇಂದ್ರ ಮೋದಿ ಸ್ಟೇಡಿಯಂ ಸೇರಿದಂತೆ ಅಹಮದಾಬಾದ್ ಸುತ್ತಮುತ್ತಲಿನ 21 ಸ್ಥಳಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಗುಜರಾತ್ ಪೊಲೀಸರು ಜೂನ್‌ನಲ್ಲಿ ಜೋಶೀಲ್ಡಾ ಅವರನ್ನು ಬಂಧಿಸಿದ್ದರು. ಆಕೆಯನ್ನು ಅಹಮದಾಬಾದ್ ಜೈಲಿನಲ್ಲಿ ಇರಿಸಲಾಗಿತ್ತು. ಕರ್ನಾಟಕ ಪೊಲೀಸರು ಈಗ ‘ಬಾಡಿ ವಾರಂಟ್’ ಮೂಲಕ ಆಕೆಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿರುವ ಜೋಶೀಲ್ಡಾ ಚೆನ್ನೈನಲ್ಲಿ ವಾಸವಿದ್ದು, ಈ ಹಿಂದೆ ಬೆಂಗಳೂರಿನ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆರೋಪಿಯ ತಾಂತ್ರಿಕ ಪರಿಣಿತಿ ಮತ್ತು ಆಕೆಯ ಕೃತ್ಯಗಳು ಉಂಟುಮಾಡಿದ ಭೀತಿಯ ಪ್ರಮಾಣವನ್ನು ಗಮನಿಸಿದರೆ, ಇದು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಂಕೀರ್ಣವಾದ ಸೈಬರ್ ವಂಚನೆಯ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement