ಕನ್ನಡ ಸಿನೆಮಾದ ಖ್ಯಾತ ಖಳನಟ ಹರೀಶ ರಾಯ್ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ ರಾಯ್ ಇಂದು, ಗುರುವಾರ (ನವೆಂಬರ್‌ 6) ನಿಧನರಾಗಿದ್ದಾರೆ. ಅವರಿಗೆ ಅವರಿಗೆ 55 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಬೆಂಗಳೂರಿನ ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಥೈರಾಯಡ್‌ ಕ್ಯಾನ್ಸರ್‌ (Thyroid Cancer) ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
‘ಓಂ’, ‘ನಲ್ಲ’, ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಭಾವಶಾಲಿ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್‌ ಜೊತೆ ಹೋರಾಟ ನಡೆಸುತ್ತಿದ್ದರು.
ಹರೀಶ ರಾಯ್ ಅವರ ಆರೋಗ್ಯ ಕೆಲವು ತಿಂಗಳುಗಳಿಂದ ಹದಗೆಡುತ್ತಲೇ ಇತ್ತು. ದೇಹ ಕೃಷಗೊಂಡಿದ್ದ ಅವರು ಗುರುತೇ ಸಿಗದಷ್ಟು ಬದಲಾವಣೆಯಾಗಿದ್ದರು. ತಮ್ಮ ಚಿಕಿತ್ಸೆಗೆ ಸಹಾಯಕ್ಕಾಗಿ ಅವರು ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂಸಿದ್ದ ಅನೇಕ ನಟರು ಅವರ ನೆರವಿಗೆ ಬಂದು ಆರ್ಥಿಕ ಸಹಾಯ ನೀಡಿದ್ದರು.

ತಮ್ಮ ಜೀವನದ ಕೊನೆಯ ದಿನಗಳವರೆಗೂ ಹೋರಾಟ ತೊರೆಯದ ಹರೀಶ ರಾಯ್ ಅವರನ್ನು ಹಲವಾರು ಸಿನಿತಾರೆಯರು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.
ಕರಾವಳಿ ಮೂಲದ ಹರೀಶ ರಾಯ್ ಅವರು 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಖಳನಟರಾಗಿ ಮನೆಮಾತಾಗಿದ್ದರು. ‘ಓಂ’, ‘ಜೋಡಿ ಹಕ್ಕಿ’, ‘ತಾಯವ್ವ’, ‘ನಲ್ಲ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ಭೂಗತ’, ‘ರಾಜ ಬಹದ್ದೂರ್’, ‘ಸಂಜು ವೆಡ್ಸ್ ಗೀತಾ’, ‘ಕೆಜಿಎಫ್ ಚಾಪ್ಟರ್ 1 ಮತ್ತು 2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಹೆಸರು ಮಾಡಿದ್ದರು. ಅವರು ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.
ಎರಡು ದಶಕಗಳಿಗಿಂತ ಹೆಚ್ಚು ಕಾಲ ನಟನೆಯಲ್ಲಿ ಅವರು ತೊಡಗಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅವರ ನಿಧನ ತುಂಬಲಾರದ ನಷ್ಟವನ್ನುಂಟುಮಾಡಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement