ಕೇಂದ್ರ ಅರಣ್ಯ ಸಲಹಾ ಸಮಿತಿ ಆಕ್ಷೇಪ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ

ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಉದ್ದೇಶಿತ 2,000 ಮೆಗಾವ್ಯಾಟ್ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಾತ್ಕಾಲಿಕ ತಡೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ (Forest Advisory Committee – FAC) ಸಭೆಯಲ್ಲಿ ಗಂಭೀರ ಪರಿಸರ ಕಾಳಜಿಗಳು ಮತ್ತು ಅರಣ್ಯ ಕಾನೂನುಗಳ ಉಲ್ಲಂಘನೆ ಬಗ್ಗೆ ಆಕ್ಷೇಪ ವ್ಯಕ್ತವಾದ ನಂತರ ಈ ಪ್ರಸ್ತಾವನೆಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅಕ್ಟೋಬರ್ 27 ರಂದು ನಡೆದ ಸಮಿತಿಯ 11 ನೇ ಸಭೆಯ ನಡಾವಳಿಗಳ ಪ್ರಕಾರ, ಉದ್ದೇಶಿತ ಯೋಜನಾ ಪ್ರದೇಶವು ಪಶ್ಚಿಮ ಘಟ್ಟದ ಕೇಂದ್ರ ಪ್ರದೇಶದಲ್ಲಿರುವ ಶರಾವತಿ ಕಣಿವೆ ಸಿಂಹ ಬಾಲದ ಸಿಂಗಳಿಕಗಳ (Lion-Tailed Macaque) ಅಭಯಾರಣ್ಯದ ವ್ಯಾಪ್ತಿಯಲ್ಲಿದೆ.
ಈ ಯೋಜನೆಯಿಂದಾಗಿ 15,000ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಸಮಿತಿ ಹೇಳಿದೆ. ಇವುಗಳಲ್ಲಿ ಹಲವು ಮರಗಳು ಜಾಗತಿಕ ಜೀವವೈವಿಧ್ಯದ 34 ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಸ್ಥಳೀಯ ಪ್ರಭೇದಗಳಾಗಿವೆ.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

ಈ ಪ್ರದೇಶವು “ಉಷ್ಣವಲಯದ ನಿತ್ಯಹರಿದ್ವರ್ಣ, ಅರೆ-ನಿತ್ಯಹರಿದ್ವರ್ಣ ಮತ್ತು ಶೋಲಾ ಹುಲ್ಲುಗಾವಲುಗಳ” ಅರಣ್ಯ ಪ್ರದೇಶವಾಗಿದ್ದು, ಇದು “ಅತ್ಯಂತ ದುರ್ಬಲ ಮತ್ತು ಸಂಕೀರ್ಣ ಪರಿಸರ ವ್ಯವಸ್ಥೆ” ಯಾಗಿದೆ. ಒಮ್ಮೆ ನಾಶವಾದರೆ ಅದನ್ನು ಅದರ ಮೂಲ ಸ್ಥಿತಿಗೆ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಅಪರೂಪದ ಪ್ರಾಣಿಗಳ ಆವಾಸಸ್ಥಾನ:
ಈ ಪ್ರದೇಶವು ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಸಿಂಗಳಿಕ (LTM) ಗಳು, ಹುಲಿ, ಚಿರತೆ, ಕರಡಿ, ಕಾಡು ನಾಯಿಗಳು, ಕಾಳಿಂಗ ಸರ್ಪ, ಮಲಬಾರ್ ದೈತ್ಯ ಅಳಿಲು ಸೇರಿದಂತೆ ಇತರ ಅಪರೂಪದ ಪ್ರಾಣಿ ಸಂಕುಲದ ನೆಲೆಯಾಗಿದೆ. ಅಭಯಾರಣ್ಯದಲ್ಲಿ 730 ಸಿಂಗಳಿಕಗಳು ಇರುವುದನ್ನು ಗಣತಿಯು ದಾಖಲಿಸಿದೆ ಮತ್ತು ಅರಣ್ಯ ನಾಶವು ಅವುಗಳ ಬದುಕಿಗೆ ಗಂಭೀರ ಅಪಾಯ ತಂದೊಡ್ಡಲಿದೆ ಎಂದು ಎಚ್ಚರಿಸಿದೆ.

ತಾಂತ್ರಿಕ ವಿನ್ಯಾಸ ಮತ್ತು ಭೂಕುಸಿತದ ಅಪಾಯ:
ಯೋಜನೆಯ ಇಂಜಿನಿಯರಿಂಗ್ ವಿನ್ಯಾಸವು ಎರಡು ಜಲಾಶಯಗಳು, 3.2 ಕಿ.ಮೀ. ಉದ್ದದ ಸುರಂಗಗಳು, 500 ಮೀಟರ್ ಆಳದ ಉತ್ಖನನ ಮತ್ತು ಭೂಗತ ಕಾಮಗಾರಿಗಾಗಿ ಡ್ರಿಲ್ಲಿಂಗ್ ಮತ್ತು ಸ್ಫೋಟಗಳನ್ನು ಒಳಗೊಂಡಿದೆ. ಈ ಪ್ರದೇಶವು ಭೂಕಂಪನ ವಲಯ 3 ರಲ್ಲಿದ್ದು, ಇಳಿಜಾರು ಕಡಿತ, ಸ್ಫೋಟ ಮತ್ತು ಭಾರೀ ಮಳೆಯ ಸಂಯೋಜನೆಯು ಭೂಕುಸಿತ ಮತ್ತು ಸವೆತದ ಅಪಾಯವನ್ನು ಹೆಚ್ಚಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಇಂತಹ ಕಾಮಗಾರಿಯು ಪರಿಸರಕ್ಕೆ ಮಾತ್ರವಲ್ಲದೆ ಮಾನವ ವಾಸಸ್ಥಳಗಳಿಗೂ ವಿನಾಶಕಾರಿಯಾಗಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಏನಿದು ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ?
ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ್ಯಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್‌ ಲಭ್ಯವಿದ್ದಾಗ, ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್‌ ಮಾಡಿ ಸಂಗ್ರಹಿಸಲಾಗುತ್ತದೆ ಮತ್ತು ವಿದ್ಯುತ್‌ ಬೇಡಿಕೆ ಹೆಚ್ಚಾದಾಗ ಆ ಸಂಗ್ರಹಿಸಿದ ನೀರನ್ನು ಪುನಃ ಬಳಸಿ ವಿದ್ಯುತ್‌ ಉತ್ಪಾದಿಸಿ ಗ್ರಿಡ್‌ಗೆ ಪೂರೈಸಲಾಗುತ್ತದೆ. ಕರ್ನಾಟಕ ವಿದ್ಯುತ್‌ ನಿಗಮವು ಈ ತಂತ್ರಜ್ಞಾನವನ್ನು ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯಡಿ (ತಳಕಳಲೆ ಮತ್ತು ಗೇರುಸೊಪ್ಪ ನಡುವೆ) ಅನುಷ್ಠಾನಕ್ಕೆ ಹೊರಟಿದ್ದು, ಇದರ ಮೂಲಕ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ.

4 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement