ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ಸಂಜೆ ದೃಢಪಡಿಸಿದೆ.
ಕಳೆದ ವಾರವೂ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ, ಅವರ ಆರೋಗ್ಯದ ಬಗ್ಗೆ ಕಳವಳಗಳು ಉಂಟಾಗಿವೆ. ಇದೀಗ, ನಟನ ಪತ್ನಿ, ನಟಿ , ಸಂಸದೆ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ ಆರೋಗ್ಯದ ಕುರಿತು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಪ್ರೀತಿ ಮತ್ತು ಕಳಕಳಿಗೆ ಧನ್ಯವಾದ ತಿಳಿಸಿದ್ದಾರೆ.
ಹೇಮಾ ಮಾಲಿನಿ ಅವರು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಧರ್ಮೇಂದ್ರ ಅವರ ನಗುತ್ತಿರುವ ಇತ್ತೀಚಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
“ವೈದ್ಯಕೀಯ ವೀಕ್ಷಣೆಗಾಗಿ ಆಸ್ಪತ್ರೆಯಲ್ಲಿರುವ ದರ್ಮೇಂದ್ರ ಅವರ ಬಗ್ಗೆ ಕಾಳಜಿ ವಹಿಸುತ್ತಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿದೆ ಮತ್ತು ನಾವೆಲ್ಲರೂ ಅವರೊಂದಿಗಿದ್ದೇವೆ. ಅವರ ಕ್ಷೇಮ ಮತ್ತು ಶೀಘ್ರ ಚೇತರಿಕೆಗಾಗಿ ನೀವೆಲ್ಲರೂ ಪ್ರಾರ್ಥಿಸುವಂತೆ ನಾನು ವಿನಂತಿಸುತ್ತೇನೆ ಎಂದು ಅವರು ಬರೆದಿದ್ದಾರೆ. ಹೇಮಾ ಮಾಲಿನಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಧರ್ಮೇಂದ್ರ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಪುತ್ರ ಸನ್ನಿ ಡಿಯೋಲ್ ತಂಡವು ಟೈಮ್ಸ್ ಆಫ್ ಇಂಡಿಯಾಗೆ ಸ್ಪಷ್ಟೀಕರಣ ನೀಡಿ, ಧರ್ಮೇಂದ್ರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದೆ. “ಇದು ಯಾವಾಗಲೂ ಹಾಗೆ ವದಂತಿ ಹಬ್ಬುತ್ತಿದೆ. ಅವರು ಗುಣಮುಖರಾಗುತ್ತಿದ್ದಾರೆ. ಅವರು ನಿಗಾದಲ್ಲಿದ್ದಾರೆ. ಚಿಂತಿಸಲು ಏನೂ ಇಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್‌ನಲ್ಲಿ ತಮ್ಮ 90 ನೇ ಜನ್ಮದಿನಕ್ಕೆ ಮುಂಚಿತವಾಗಿ ನಟ ಆಗಾಗ್ಗೆ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ, ಆಸ್ಪತ್ರೆಯ ವಾಸ್ತವ್ಯ ಮುನ್ನೆಚ್ಚರಿಕೆ ಕ್ರಮವಾಗಿತ್ತು ಎಂದು ಕುಟುಂಬವು ಸಮರ್ಥಿಸಿಕೊಂಡಿದೆ. ಆಸ್ಪತ್ರೆ ಮೂಲಗಳು ಸಹ “ಆತಂಕಕ್ಕೆ ಯಾವುದೇ ಕಾರಣವಿಲ್ಲ” ಮತ್ತು ಹಿರಿಯ ನಟ ಉತ್ತಮ ಮನಸ್ಥಿತಿಯಲ್ಲಿದ್ದಾರೆ ಎಂದು ಪುನರುಚ್ಚರಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ