ಚಿತ್ತಾಪುರದಲ್ಲಿ ಆರ್‌ ಎಸ್‌ ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ

ಕಲಬುರಗಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರ್ಗಿಯ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 16ರಂದು ನಡೆಸಲು ಉದ್ದೇಶಿಸಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನ್ಯಾಯಾಲಯದ ಸಲಹೆಯಂತೆ ಶಾಂತಿ ಸಭೆ ನಡೆಸಿದ ಬಳಿಕ, ಅರ್ಜಿದಾರರಿಗೆ ನವೆಂಬರ್ 16ರಂದು ಪಥಸಂಚಲನ ನಡೆಸಲು ಚಿತ್ತಾಪುರ ತಹಶೀಲ್ದಾರ ನೀಡಿರುವ ಅನುಮತಿಯನ್ನು ಪರಿಗಣಿಸಿದ ಪೀಠವು 300 ಆರ್‌ಎಸ್‌ಎಸ್ ಸದಸ್ಯರು ಹಾಗೂ 50 ವಾದ್ಯಗಾರರ ವಾದ್ಯವೃಂದಕ್ಕೆ ಪಥಸಂಚಲನ ನಡೆಸಲು ಅನುಮತಿ ನೀಡಿತು.

ಅರ್ಜಿದಾರರಿಗೆ ನವೆಂಬರ್ 16ರಂದು ಪಥಸಂಚಲನ ನಡೆಸಲು ಷರತ್ತುಬದ್ಧ ಅನುಮತಿ ನೀಡಿ ನವೆಂಬರ್ 12ರಂದು ತಹಶೀಲ್ದಾರ್ ಕಚೇರಿಯಿಂದ ಹೊರಡಿಸಲಾದ ಆದೇಶ ಪ್ರತಿಯನ್ನು ದಾಖಲಿಸಿಕೊಳ್ಳಲಾಯಿತು. ಚಿತ್ತಾಪುರ ತಹಸೀಲ್ದಾರರು ಈಗಾಗಲೇ  ನವೆಂಬರ್‌ 16ಕ್ಕೆ ಅನುಮತಿ ನೀಡಿದ್ದು, 300 ಜನರು ಹಾಗೂ  25  ವಾದ್ಯಗಾರರು ಪಾಲ್ಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದರು. ಅದಾಗ್ಯೂ, ಪಥಸಂಚಲನದಲ್ಲಿ 300 ಸದಸ್ಯರು ಹಾಗೂ 25 ವಾದ್ಯಗಾರರು ಭಾಗವಹಿಸುವಂತೆ ವಿಧಿಸಲಾಗಿರುವ ಷರತ್ತು ಮಾರ್ಪಡಿಸಿ, 600 ಸದಸ್ಯರು ಹಾಗೂ 50 ವಾದ್ಯಗಾರರಿಗೆ ಅವಕಾಶ ನೀಡಬೇಕು” ಎಂದು ಅರ್ಜಿದಾರರು ಮನವಿ ಮಾಡಿದರು. ಆದರೆ ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ “ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗರಿಷ್ಠ 300 ಜನರಿಗೆ ಮಾತ್ರ ಅನುಮತಿ ನೀಡಬೇಕು” ಎಂದು ವಾದಿಸಿದರು.
ಎರಡು ಪಕ್ಷಗಳ ವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಪೀಠವು 350 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಇದರಲ್ಲಿ 300 ಗಣವೇಷಧಾರಿಗಳು ಮತ್ತು 50 ಬ್ಯಾಂಡ್ ಸದಸ್ಯರು ಸೇರಿದ್ದಾರೆ. ನವೆಂಬರ್ 16ರಂದು ಮಧ್ಯಾಹ್ನ 3:30ರಿಂದ ಸಂಜೆ 5:45ರವರೆಗೆ ಪಥಸಂಚಲನ ನಡೆಯಲು ಅವಕಾಶ ನೀಡಲಾಗಿದೆ.

ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement