
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಮೂರು ದಿನಗಳ ಮುನ್ನ, ಅಂದರೆ ನವೆಂಬರ್ 11 ರಂದು, ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಮಾಡಿದ ಒಂದು ‘ಎಕ್ಸ್’ (ಹಿಂದಿನ ಟ್ವಿಟರ್) ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವ್ಯಂಗ್ಯದಿಂದ ಕೂಡಿದ್ದ ಈ ಪೋಸ್ಟ್, ದೇಶದ ರಾಜಕೀಯವಾಗಿ ಅತಿ ನಿರ್ಣಾಯಕ ರಾಜ್ಯಗಳಲ್ಲಿ ಒಂದಾದ ಬಿಹಾರದ ಹೈ-ವೋಲ್ಟೇಜ್ ಚುನಾವಣೆಗೆ ಒಂದು ಮಹತ್ವದ ವಾಸ್ತವವಾಗಿ ಹೊರಹೊಮ್ಮಿದೆ.
ಆಡಳಿತ ಪಕ್ಷದ ವಿರುದ್ಧ ಆಗಾಗ್ಗೆ ವ್ಯಂಗ್ಯದ ಮಾತುಗಳನ್ನು ಆಡುವ 88 ವರ್ಷದ ಸಿನ್ಹಾ, ಈ ಬಾರಿಯ ಬಿಹಾರದ ಚುನಾವಣಾ ಫಲಿತಾಂಶವನ್ನು ನಿಖರವಾಗಿ ಊಹಿಸುವ ಮೂಲಕ, ರಾಜಕೀಯ ವಿಶ್ಲೇಷಕರನ್ನು ಮತ್ತು ಚುನಾವಣಾ ಸಮೀಕ್ಷಕರನ್ನೂ ಮೀರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನ್ಹಾ ‘ಎಕ್ಸ್’ ಪೋಸ್ಟ್‌ನಲ್ಲಿ ಏನಿದೆ?
ನವೆಂಬರ್ 11 ರಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ತಮ್ಮ ‘ಎಕ್ಸ್’ ಹ್ಯಾಂಡಲ್‌ನಿಂದ ಮಾಡಿದ ಪೋಸ್ಟ್‌ನಲ್ಲಿ “ಬಿಹಾರ ವಿಧಾನಸಭಾ ಚುನಾವಣೆಯ ಎಲ್ಲಾ ‘ಎಕ್ಸಿಟ್ ಪೋಲ್’ಗಳು ತಪ್ಪಾಗಲಿವೆ. ನನ್ನ ಸಮೀಕ್ಷೆಯ ಪ್ರಕಾರ, ಎನ್‌ಡಿಎ (NDA) ಕನಿಷ್ಠ 200 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಮಹಾಘಟಬಂಧನ ಧೂಳೀಪಟವಾಗುತ್ತದೆ. ನವೆಂಬರ್ 14 ರಂದು ನನ್ನ ಭವಿಷ್ಯವು ಸಂಪೂರ್ಣವಾಗಿ ತಪ್ಪಾಗಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಬರೆದಿದ್ದರು.

ವ್ಯಂಗ್ಯವೇ ನಿಜವಾಯಿತು….
ಈ ವ್ಯಂಗ್ಯಭರಿತ ಪೋಸ್ಟ್ ನವೆಂಬರ್ 14 ರಂದು ಸತ್ಯವಾಯಿತು. 243 ಸದಸ್ಯ ಬಲದ ಸದನದಲ್ಲಿ ಎನ್‌ಡಿಎ ಮೈತ್ರಿಕೂಟವು ನಿಜಕ್ಕೂ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿತು. ಮಹಾಘಟಬಂಧನಕ್ಕೆ ಇದು ಸಂಪೂರ್ಣ ಸೋಲಾಗಿತ್ತು, ಹಿಂದಿನ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಅದು 80 ಕ್ಕೂ ಹೆಚ್ಚು ಸ್ಥಾನಗಳನ್ನು ಕಡೆದುಕೊಂಡಿತು. ಹಾಗೂ ಅದು ೩೫ ಸ್ಥಾನಗಳಿಗೆ ಸೀಮಿತವಾಯಿತು.
ಯಶವಂತ ಸಿನ್ಹಾ ರಾಜಕೀಯ ಹಿನ್ನೆಲೆ:
ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ:
ಎಕ್ಸಿಟ್ ಪೋಲ್‌ಗಳು ಬಿಹಾರದಲ್ಲಿ ಎನ್‌ಡಿಎ ಮರಳಿ ಅಧಿಕಾರಕ್ಕೆ ಬರುವುದನ್ನು ಭವಿಷ್ಯ ನುಡಿದ ನಂತರ ಸಿನ್ಹಾ ಅವರ ಈ ವ್ಯಂಗ್ಯಭರಿತ ಪೋಸ್ಟ್ ಬಂದಿತ್ತು. ನವೆಂಬರ್ 11 ರಂದು ಹಂಚಿಕೊಂಡ ಈ ಟ್ವೀಟ್ ಫಲಿತಾಂಶದ ದಿನದಂದು ಮಧ್ಯಾಹ್ನದ ವೇಳೆಗೆ ಭಾರೀ ವೈರಲ್ ಆಯಿತು ಮತ್ತು ಅದಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿತು. ಪ್ರಸ್ತುತ, ಸಿನ್ಹಾ ಅವರ ಈ ಟ್ವೀಟ್ ಸುಮಾರು ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.
ಸಿನ್ಹಾ ರಾಜಕೀಯ ಜೀವನ:
ಪಾಟ್ನಾ ಮೂಲದ ಸಿನ್ಹಾ ಅವರು, 1984 ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸುವ ಮೊದಲು ಎರಡು ದಶಕಗಳ ಕಾಲ ಅಧಿಕಾರಿಯಾಗಿ (ಬ್ಯೂರೋಕ್ರಾಟ್) ಸೇವೆ ಸಲ್ಲಿಸಿದ್ದರು. ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹು ಅವಧಿಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ಸಂಸದರಾಗಿದ್ದಾರೆ. ಅಲ್ಲದೆ, 1990-91 ರಲ್ಲಿ ಚಂದ್ರಶೇಖರ ಅವರ ಸರ್ಕಾರದಲ್ಲಿ ಮತ್ತು ನಂತರ 1998-2002 ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2002 ರಿಂದ 2004 ರವರೆಗೆ ವಿದೇಶಾಂಗ ಸಚಿವರಾಗಿದ್ದ ಅವರು, 2018 ರಲ್ಲಿ ಬಿಜೆಪಿಯಿಂದ ನಿರ್ಗಮಿಸಿದರು. 2022 ರಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ವಿಫಲರಾದ ನಂತರ, ಸಿನ್ಹಾ ಅವರು ಸಾರ್ವಜನಿಕ ಗಮನದಿಂದ ಬಹುತೇಕ ದೂರ ಉಳಿದಿದ್ದರು. ಆದರೆ, ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವ್ಯಂಗ್ಯಭರಿತ ಪೋಸ್ಟ್ ಮತ್ತೊಮ್ಮೆ ಅವರನ್ನು ಸುದ್ದಿಗೆ ತಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ