
ಉಡುಪಿ : ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಇಬ್ಬರನ್ನು ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಘಟಕದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಂಧಿತರನ್ನು ಉತ್ತರ ಪ್ರದೇಶದವರಾದ ರೋಹಿತ್(26) ಮತ್ತು ಸಂತ್ರಿ(37) ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿಗಳನ್ನು ಸುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಕೊಚ್ಚಿನ್ ಶಿಪ್ ಯಾರ್ಡ್ ಭಾರತೀಯ ನೌಕಾಪಡೆಗೆ ಟಗ್‌ಗಳನ್ನು ನಿರ್ಮಿಸಿ ಕೊಡುವ ಸಂಸ್ಥೆಯಾಗಿದ್ದು, ಖಾಸಗಿ ಸಂಸ್ಥೆಗಳಿಗೂ ಹಡಗುಗಳನ್ನು ನಿರ್ಮಿಸಿಕೊಡುತ್ತದೆ. ಇದರ ಪ್ರಧಾನ ಕಚೇರಿ ಕೇರಳದಲ್ಲಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ಇಬ್ಬರು ಕಳೆದ ಒಂದೂವರೆ ವರ್ಷಗಳಿಂದ ಹಡಗು ನಿರ್ಮಾಣ ಮತ್ತು ನೌಕಾ ಉಪಕರಣಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ, ರಹಸ್ಯ ತಾಂತ್ರಿಕ ವಿವರಗಳನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎಂಬ ಗಂಭೀರ ವಿಚಾರ ಬಯಲಾಗಿದೆ.
ಕೇರಳದಲ್ಲಿ ಕೆಲಸ ಮಾಡುವ ಸಮಯದಲ್ಲಿ ರೋಹಿತ್ ಹಲವು ಬಾರಿ ಮಾಹಿತಿ ಹಂಚಿಕೊಂಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ನೀಡಿದ ದೂರಿನ ಆಧಾರದಲ್ಲಿ ಉಡುಪಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಮಾಹಿತಿ ಹಂಚಿಕೆ ಮಾಡಿ ಹಣ ಪಡೆಯುತ್ತಿದ್ದರೆಂಬ ಅಂಶವೂ ಪತ್ತೆಯಾಗಿದೆ.
ಈ ಹಿಂದೆ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್, ಹಣಕ್ಕಾಗಿ ವಾಟ್ಸಾಪ್ ಮೂಲಕ ವರ್ಗೀಕೃತ ಹಡಗು ಪಟ್ಟಿಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಅವರನ್ನು ಮಲ್ಪೆ ಹಡಗುಕಟ್ಟೆಯಲ್ಲಿ ಪೋಸ್ಟ್ ಮಾಡಿದ ನಂತರ, ಆತ ಮತ್ತು ಆತನ ಸಹಚರ ಹಣಕ್ಕಾಗಿ ನೌಕಾಪಡೆಯ ಹಡಗಿನ ಮಾಹಿತಿ ನೀಡುವುದನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಒ ನೀಡಿದ ಔಪಚಾರಿಕ ದೂರಿನ ಮೇರೆಗೆ ಈ ಬಂಧನಗಳನ್ನು ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ