ಅಬುಜಾ : ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ನೈಜೀರಿಯಾದಲ್ಲಿ ಅಪಹರಣದ ಸರಣಿ ಘಟನೆಗಳು ಮುಂದುವರಿದಿದ್ದು, ಪಶ್ಚಿಮ ಪ್ರಾಂತ್ಯದಲ್ಲಿರುವ ಕ್ಯಾಥೋಲಿಕ್ ಬೋರ್ಡಿಂಗ್ ಶಾಲೆಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ 200ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಕ್ರಿಶ್ಚಿಯನ್ ಅಸೋಸಿಯೇಷನ್ ಆಫ್ ನೈಜೀರಿಯಾ (CAN) ತಿಳಿಸಿದೆ.
ಈ ದಾಳಿ ಮತ್ತು ಅಪಹರಣವು ಅಗ್ವಾರಾ ಸ್ಥಳೀಯ ಸರ್ಕಾರದ ಪಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ಶುಕ್ರವಾರ ನಡೆದಿದೆ. ಬಂದೂಕುಧಾರಿಗಳು ಒಟ್ಟು 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಒತ್ತೆಯಾಳಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ನೈಜರ್ ರಾಜ್ಯದ ಸಿಎಎನ್ (CAN) ಘಟಕದ ವಕ್ತಾರರಾದ ಡೇನಿಯಲ್ ಅಟೋರಿ ತಿಳಿಸಿದ್ದಾರೆ.
ಅಸೋಸಿಯೇಷನ್ ತಮ್ಮ “ಮಕ್ಕಳು ಸುರಕ್ಷಿತವಾಗಿ ಮರಳಿ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅಟೋರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭದ್ರತಾ ಪಡೆಗಳ ನಿಯೋಜನೆ
ನೈಜರ್ ರಾಜ್ಯ ಪೊಲೀಸ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಈ ಅಪಹರಣವು ಮುಂಜಾನೆ ಸಮಯದಲ್ಲಿ ನಡೆದಿದೆ. ಘಟನೆ ನಡೆದ ನಂತರ ಸೇನಾ ಮತ್ತು ಭದ್ರತಾ ಪಡೆಗಳನ್ನು ಸಮುದಾಯಕ್ಕೆ ನಿಯೋಜಿಸಲಾಗಿದೆ. ಸೇಂಟ್ ಮೇರಿಸ್ ಅನ್ನು ಪ್ರೌಢಶಾಲೆ (ಸೆಕೆಂಡರಿ ಸ್ಕೂಲ್) ಎಂದು ವಿವರಿಸಲಾಗಿದ್ದು, ನೈಜೀರಿಯಾದಲ್ಲಿ ಇದು 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಬೋಧಿಸುತ್ತದೆ.
ಪೋಷಕರ ಆತಂಕ
7 ರಿಂದ 10 ವರ್ಷ ವಯಸ್ಸಿನ ತನ್ನ ನಾಲ್ಕು ಮೊಮ್ಮಕ್ಕಳು ಅಪಹರಣಕ್ಕೊಳಗಾದವರಲ್ಲಿ ಸೇರಿದ್ದಾರೆ ಎಂದು 62 ವರ್ಷದ ದೌಡಾ ಚೆಕುಲಾ ಹೇಳಿದ್ದಾರೆ. “ಈ ಬೆಳಿಗ್ಗೆಯಿಂದ ನಮಗೆ ಯಾವುದೇ ಸುದ್ದಿ ತಿಳಿದಿಲ್ಲ. ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ತಪ್ಪಿಸಿಕೊಳ್ಳಲು ಸಾಧ್ಯವಾದ ಮಕ್ಕಳು ಚೆಲ್ಲಾಪಿಲ್ಲಿಯಾಗಿದ್ದಾರೆ. ಕೆಲವರು ತಮ್ಮ ಮನೆಗಳಿಗೆ ಓಡಿಹೋಗಿದ್ದಾರೆ. ಕರೆದೊಯ್ದ ಮಕ್ಕಳೊಂದಿಗೆ ದಾಳಿಕೋರರು ಇನ್ನೂ ಕಾಡಿನೊಳಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ನಮಗೆ ಸಿಕ್ಕಿದೆ,” ಎಂದು ಚೆಕುಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ
ಅಪಹರಣದ ಬೆದರಿಕೆಯ ಬಗ್ಗೆ ಗುಪ್ತಚರ ಎಚ್ಚರಿಕೆ ಇದ್ದರೂ ಈ ಘಟನೆ ನಡೆದಿದೆ ಎಂದು ನೈಜರ್ ರಾಜ್ಯ ಸರ್ಕಾರದ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.
“ದುರದೃಷ್ಟವಶಾತ್, ಸೇಂಟ್ ಮೇರಿಸ್ ಶಾಲೆಯು ರಾಜ್ಯ ಸರ್ಕಾರಕ್ಕೆ ತಿಳಿಸದೆ ಅಥವಾ ಅನುಮತಿ ಪಡೆಯದೆ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತಪ್ಪಿಸಬಹುದಾದ ಅಪಾಯಕ್ಕೆ ಸಿಲುಕಿಸಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಾಳಿ ನಡೆದ ಸಮಯದಲ್ಲಿ ಶಾಲೆಯನ್ನು ರಕ್ಷಿಸಲು ಸ್ಥಳೀಯ ಭದ್ರತಾ ವ್ಯವಸ್ಥೆ ಮಾತ್ರ ಇತ್ತು, ಅಧಿಕೃತ ಪೊಲೀಸ್ ಅಥವಾ ಸರ್ಕಾರಿ ಪಡೆಗಳು ಇರಲಿಲ್ಲ ಎಂದು ಪಪಿರಿ ನಿವಾಸಿ ಉಮರ್ ಯೂನಸ್ ತಿಳಿಸಿದ್ದಾರೆ.
ಇತ್ತೀಚಿನ ಅಪಹರಣಗಳು
ಈ ಘಟನೆ ನಡೆಯುವ ಕೆಲವು ದಿನಗಳ ಮೊದಲು, ಸೋಮವಾರದಂದು ಬಂದೂಕುಧಾರಿಗಳು ನೆರೆಯ ಕೆಬ್ಬಿ ರಾಜ್ಯದ ಹೈಸ್ಕೂಲ್ ಮೇಲೆ ದಾಳಿ ಮಾಡಿ 25 ವಿದ್ಯಾರ್ಥಿನಿಯರನ್ನು ಅಪಹರಿಸಿದ್ದರು.
ನೈಜರ್ ರಾಜ್ಯದ ಗಡಿಯಲ್ಲಿರುವ ಕ್ವಾರಾ ರಾಜ್ಯದಲ್ಲಿ ಸೋಮವಾರ ನಡೆದ ಪ್ರತ್ಯೇಕ ದಾಳಿಯಲ್ಲಿ ಬಂದೂಕುಧಾರಿಗಳು ಚರ್ಚ್‌ನ ಮೇಲೆ ದಾಳಿ ನಡೆಸಿ ಇಬ್ಬರನ್ನು ಕೊಂದಿದ್ದಾರೆ. 38 ಭಕ್ತರನ್ನು ಅಪಹರಿಸಲಾಗಿದೆ ಮತ್ತು ಅವರ ಬಿಡುಗಡೆಗೆ ಕಿಡ್ನ್ಯಾಪರ್‌ಗಳು ಪ್ರತಿ ವ್ಯಕ್ತಿಗೆ ₹57 ಲಕ್ಷ ರೂ.ಗಳ (100 ಮಿಲಿಯನ್ ನೈರಾ) ಸುಲಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಚರ್ಚ್‌ನ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಸರಣಿ ಘಟನೆಗಳ ಹಿನ್ನೆಲೆಯಲ್ಲಿ ನೈಜೀರಿಯಾದ ಅಧ್ಯಕ್ಷ ಬೋಲಾ ಟಿನ್ಬು ಅವರು ಈ ವಾರಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ G20 ಶೃಂಗಸಭೆಯ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ